ಬುಧವಾರ, ನವೆಂಬರ್ 25, 2020
21 °C

ಭೂ ರಕ್ಷಣೆ ಕಾನೂನು ಜಮ್ಮು–ಕಾಶ್ಮೀರಕ್ಕೆ ಏಕಿಲ್ಲ?–ಓಮರ್‌ ಅಬ್ದುಲ್ಲಾ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್‌ ಅಬ್ದುಲ್ಲಾ

ಶ್ರೀನಗರ: 'ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿಶೇಷ ಕಾನೂನುಗಳಿವೆ, ಅಲ್ಲಿ ದೇಶದ ಇತರೆ ಭಾಗದ ಜನರು ಜಮೀನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಏಕೆ ಅಂತಹ ಕಾನೂನುಗಳಿಲ್ಲ' ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್‌ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

'ಹಿಮಾಚಲ ಪ್ರದೇಶ, ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಇತರೆ ಪ್ರದೇಶಗಳ ಯಾವುದೇ ಭಾರತೀಯ ಇವತ್ತಿಗೂ ಅಲ್ಲಿ ಜಮೀನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಇಂಥ ಕಾನೂನುಗಳ ಬಗ್ಗೆ ಮಾತನಾಡಿದರೆ ನಾವು ಮಾತ್ರವೇ ರಾಷ್ಟ್ರವಿರೋಧಿಗಳಾಗುವುದು ಯಾಕಾಗಿ? ಇಂಥದ್ದೇ ಕೂಗು ಇತರೆ ರಾಜ್ಯಗಳಲ್ಲಿಯೂ ಕೇಳಿ ಬಂದಾಗ ಮಾಧ್ಯಮಗಳಲ್ಲಿ ಯಾವುದೇ ಚರ್ಚೆಗಳು ಏಕೆ ನಡೆಯುವುದಿಲ್ಲ?' ಎಂದು ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಕೇಳಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ ಪ್ರಧಾನ ಕಚೇರಿಯಲ್ಲಿ ಅವರು ಗುರುವಾರ ಮಾತನಾಡಿದರು. ಹೋರಾಟವು ನಮ್ಮ ಅಸ್ತಿತ್ವದ ಉಳಿವಿಗಾಗಿ, ನಮ್ಮ ನಾಳೆಗಳಿಗಾಗಿ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರದ ಆಡಳಿತದ ಕುರಿತು ಪ್ರಸ್ತಾಪಿಸಿ, ನಮ್ಮನ್ನು ಬೇರೆ ಮಾಡಲು ಮತ್ತು ಅಶಕ್ತರನ್ನಾಗಿಸಲು ಕೇಂದ್ರ ಸರ್ಕಾರವು ಎಲ್ಲ ರೀತಿಯ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

'ದೆಹಲಿವಾಲಾಗಳಿಗೆ ಬೇಕಿರುವುದು ಏನು? ಮುಖ್ಯವಾಹಿನಿಯಿಂದ ನಾವು ಹೊರಗುಳಿಯುವುದೇ? ನಮ್ಮ ಅಸ್ತಿತ್ವ ಮತ್ತು ನೆಲದ ಉಳಿವಿಗಾಗಿ ನಾವು ಹೋರಾಡುತ್ತಿದ್ದೇವೆ. ಹೊಸ (ತಿದ್ದುಪಡಿ) ಭೂ ಕಾನೂನುಗಳ ವಿರುದ್ಧ ಇಂದು ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ, ಆದರೆ ಅವಕಾಶ ಸಿಗುತ್ತಿಲ್ಲ. ಸಂವಿಧಾನಬದ್ಧವಾಗಿ ಮತ್ತು ಶಾಂತಿಯುತವಾಗಿ ನಾವು ಹಕ್ಕನ್ನು ಕೇಳುವುದು ನಮ್ಮ ತಪ್ಪೇ?' ಎಂದಿದ್ದಾರೆ.

'ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಒಟ್ಟುಗೂಡಿಸುವ ಮಾತುಗಳನ್ನು ಆಡುತ್ತಿರುವವರು ನಮ್ಮೊಂದಿಗೆ ಇಂದಿಗೂ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಭೂ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದೇ ಅದಕ್ಕೆ ಸೂಕ್ತ ಉದಾಹರಣೆಯಾಗಿದೆ' ಎಂದು ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ ಇತರೆ ಜನರು ಜಮೀನು ಖರೀದಿಸಲು ಇದ್ದ ಎಲ್ಲ ತೊಡಕುಗಳನ್ನು ಹಲವು ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ಮಂಗಳವಾರ ನಿವಾರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು