ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: 1,157 ಅಭ್ಯರ್ಥಿಗಳಿಗೆ ಅಪರಾಧದ ಹಿನ್ನೆಲೆ

Last Updated 8 ನವೆಂಬರ್ 2020, 20:02 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ 1,157 ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ ಎಂಬುದು ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮೂರು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 3,733 ಮಂದಿ ಕಣಕ್ಕಿಳಿದಿದ್ದಾರೆ. ಇದರಲ್ಲಿ 371 ಮಹಿಳಾ ಅಭ್ಯರ್ಥಿಗಳೂ ಇದ್ದಾರೆ ಎಂದು ಆಯೋಗ ಹೇಳಿದೆ.

ಈ ವರ್ಷದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದ ಅನ್ವಯ ಮಾರ್ಚ್‌ನಲ್ಲಿ ಆಯೋಗವು ಪ್ರಕಟಣೆಯೊಂದನ್ನು ಹೊರಡಿಸಿತ್ತು. ಅಪರಾಧ ಹಿನ್ನೆಲೆ ಇರುವವರನ್ನು ಏತಕ್ಕಾಗಿ ಕಣಕ್ಕಿಳಿಸುತ್ತಿದ್ದೀರಿ ಎಂಬುದಕ್ಕೆ ಸಮರ್ಥನೆ ನೀಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಪರಾಧದ ಹಿನ್ನೆಲೆಯ ಮಾಹಿತಿಯನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದ್ದವು.

ಎಲ್ಲಾ ರಾಜಕೀಯ ಪಕ್ಷಗಳೂ ತಾವು ಟಿಕೆಟ್‌ ನೀಡಿರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಕುರಿತು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮೂರು ಹಂತಗಳಲ್ಲಿ ಜಾಹೀರಾತು ನೀಡಬೇಕೆಂದೂ ಆಯೋಗವು ಸೆಪ್ಟೆಂಬರ್‌ನಲ್ಲಿ ಸೂಚಿಸಿತ್ತು. ಚುನಾವಣಾ ಅವಧಿಯಲ್ಲಿ ಈ ಜಾಹೀರಾತುಗಳು ಪ್ರಕಟವಾಗಬೇಕೆಂದೂ ನಿರ್ದೇಶಿಸಿತ್ತು.

ಫಲಿತಾಂಶ ಪ್ರಕಟ ವಿಳಂಬ ಸಾಧ್ಯತೆ

ಪಟ್ನಾ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನವೆಂಬರ್‌ 10ರಂದು ಪ್ರಕಟವಾಗಲಿದೆ. ಆದರೆ, ಈ ಬಾರಿ, ನಾಲ್ಕರಿಂದ ಐದು ಗಂಟೆಗಳ ಕಾಲ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಕೋವಿಡ್‌–19 ಸಂದರ್ಭದಲ್ಲಿ ಚುನಾವಣೆ ನಡೆದಿರುವ ಬಿಹಾರದಲ್ಲಿ, ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆಗೊಳಿಸಿತು. ಇದರಿಂದಾಗಿ ಮತಗಟ್ಟೆಗಳು ಹೆಚ್ಚಾದವು. ಸಹಜವಾಗಿಯೇ, ವಿದ್ಯುನ್ಮಾನ ಮತಯಂತ್ರಗಳ ಸಂಖ್ಯೆಯಲ್ಲೂ ಹೆಚ್ಚಳವಾಯಿತು. ಕಳೆದ ಚುನಾವಣೆಗಿಂತ ಈ ಬಾರಿ ವಿದ್ಯುನ್ಮಾನ ಮತ ಯಂತ್ರಗಳು ಹೆಚ್ಚಾಗಿರುವುದರಿಂದ ಮತ ಎಣಿಕೆ ಸುತ್ತುಗಳು ಸಹ ಹೆಚ್ಚಾಗಲಿವೆ. ಹೀಗಾಗಿ ಫಲಿತಾಂಶ ಪ್ರಕಟ ಮಾಡುವುದು ವಿಳಂಬವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಹಾರದಲ್ಲಿ 7.5 ಕೋಟಿ ಮತದಾರರಿದ್ದಾರೆ. ಕೋವಿಡ್‌–19 ಕಾರಣಕ್ಕೆ ಚುನಾವಣಾ ಆಯೋಗ ಈ ಮೊದಲು 75 ಸಾವಿರ ಇದ್ದ ಮತಗಟ್ಟೆಗಳನ್ನು 1.06 ಲಕ್ಷ ಮತಗಟ್ಟೆಗಳಿಗೆ ಹೆಚ್ಚಿಸಿತು. ಹೀಗಾಗಿ, ಕೆಲವು ಕ್ಷೇತ್ರಗಳ ಫಲಿತಾಂಶ ರಾತ್ರಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT