ಬುಧವಾರ, ಸೆಪ್ಟೆಂಬರ್ 28, 2022
27 °C

ಸಂಸತ್ ನಿಷ್ಕ್ರಿಯವಾಗಿದೆ, ಪ್ರಜಾಪ್ರಭುತ್ವ ಏದುಸಿರು ಬಿಡುತ್ತಿದೆ: ಪಿ. ಚಿದಂಬರಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಹೆಚ್ಚಿನ ಸರ್ಕಾರಿ ಸಂಸ್ಥೆಗಳು ಭ್ರಷ್ಟವಾಗಿವೆ. ಸಂಸತ್ ನಿಷ್ಕ್ರಿಯವಾಗಿದೆ. ಪ್ರಜಾಪ್ರಭುತ್ವ ಏದುಸಿರು ಬಿಡುತ್ತಿದೆ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಭಾನುವಾರ ಟೀಕಿಸಿದ್ದಾರೆ.

‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಪ್ರತಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ. ಖರ್ಗೆ ಅವರು ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಿದ್ದಾಗಲೇ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.

ಬೆಲೆ ಏರಿಕೆ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯನ್ನು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ದಿನದ ಜತೆ ಸಂಬಂಧ ಕಲ್ಪಿಸಿ ಹೋಲಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿರುವುದಕ್ಕೆ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ದಿನವನ್ನು ನಿರ್ಧರಿಸಿದಾಗ ರಾಮ ಮಂದಿರ ಶಿಲಾನ್ಯಾಸದ ವಿಚಾರ ನಮ್ಮ ಮನಸ್ಸಿನಲ್ಲಿ ಇರಲೇ ಇಲ್ಲ ಎಂದು ಅವರು ಹೇಳಿದ್ದಾರೆ.

ಜನತಂತ್ರದ ಕೊಲೆ: ಕಾಂಗ್ರೆಸ್‌ ಸಂಸದರ ಆಕ್ರೋಶ, ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ

‘ಎಲ್ಲ ಸಂಸದರು ದೆಹಲಿಯಲ್ಲಿರುವ ದಿನ ನೋಡಿಕೊಂಡು ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಶನಿವಾರ ಉಪ ರಾಷ್ಟ್ರಪತಿ ಚುನಾವಣೆ ಇದ್ದುದರಿಂದ ಶುಕ್ರವಾರ ಪ್ರತಿಭಟನೆ ನಿಗದಿ ಮಾಡಿದ್ದೆವು. ಬೇರೆಯವರನ್ನು ದೂರುವುದಕ್ಕಾಗಿ ಅವರು ಏನು ಬೇಕಾದರೂ ಹೇಳಬಹುದು’ ಎಂದು ಚಿದಂಬರಂ ತಿರುಗೇಟು ನೀಡಿದ್ದಾರೆ.

‘ಎಲ್ಲದಕ್ಕಿಂತ ಹೆಚ್ಚಾಗಿ ಜಮ್ಮು ಮತ್ತು ಕಾಶ್ಮೀರವನ್ನು ಅಕ್ರಮವಾಗಿ ಛಿದ್ರಗೊಳಿಸಿದ (2019ರ ಆಗಸ್ಟ್ 5) ಅದೇ ದಿನವಾಗಿತ್ತು. ಗಂಭೀರ ವಿಷಯದ ಬಗ್ಗೆ ಚರ್ಚಿಸುವುದಕ್ಕಾಗಿ ಈ ವಿಚಾರವನ್ನು ಬದಿಗಿಡೋಣ’ ಎಂದು ಅವರು ಹೇಳಿದ್ದಾರೆ.

ಪಕ್ಷದ ನಾಯಕರು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವುದನ್ನು ತಪ್ಪಿಸುವುದಕ್ಕಾಗಿ ಪ್ರತಿಭಟನೆ ಆಯೋಜಿಸಲಾಗಿತ್ತು ಎಂಬ ಬಿಜೆಪಿ ನಾಯಕರ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ.

ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ: ಅಮಿತ್ ಶಾ

ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್‌ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದ 1ನೇ ದ್ವಾರದ ಬಳಿ ‍ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದರು. ಎಲ್ಲರೂ ಕಪ್ಪು ಬಟ್ಟೆ ಧರಿಸಿದ್ದರು. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ನಂತರ ಅಲ್ಲಿಂದ ರಾಷ್ಟ್ರಪತಿ ಭವನದತ್ತ ಮೆರವಣಿಗೆ ನಡೆಸಿದ್ದರು. ಮಾರ್ಗ ಮಧ್ಯದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕಪ್ಪು ಬಟ್ಟೆ ಧರಿಸುವ ಮೂಲಕ ಕಾಂಗ್ರೆಸ್‌ ನಾಯಕರು ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆ ಎಂದು ಅಮಿತ್ ಶಾ ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿನ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಒಂದು ಧರ್ಮದವರನ್ನು ಓಲೈಸುತ್ತಿದೆ. ಇದರಿಂದ ಶ್ರೀ ರಾಮನಿಗೆ ಅವಮಾನವಾಗಿದೆ ಎಂದು ಶಾ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು