ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮ’ ಪ್ರಶಸ್ತಿ 2022: ‘ಎಲೆಮರೆ ಕಾಯಿ’ಗಳಿಗೆ ‘ಪದ್ಮಶ್ರೀ’

ಕಾಶಿಯ 125ರ ಯೋಗ ಪಟು ಶಿವಾನಂದಗೆ ಪ್ರಶಸ್ತಿ
Last Updated 26 ಜನವರಿ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ದೇಶದ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’ ಎಂದೇ ಕರೆಯಲಾಗುವ ‘ಪದ್ಮ’ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಅದ್ವಿತೀಯ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಅಂಥ ವಿಶಿಷ್ಟ ಸಾಧನೆ ಮಾಡಿದ ಕೆಲವು ಹಿರಿಯ ಸಾಧಕರನ್ನೂ ಪರಿಗಣಿಸಲಾಗಿದೆ.

ಇವರಲ್ಲಿ ಕಾಶಿ ಮೂಲದ 125 ವರ್ಷ ವಯಸ್ಸಿನ ಯೋಗ ಪಟು, ಪ್ರವಾಹ ಸಂತ್ರಸ್ತರಿಗಾಗಿ ಬಟ್ಟೆ ಸಂಗ್ರಹಿಸಲೆಂದೇ ‘ವಸ್ತ್ರ ಬ್ಯಾಂಕ್‌’ ಆರಂಭಿಸಿದ್ದ 91 ವರ್ಷದ ವೃದ್ಧೆ, ಪೋಲಿಯೊ ವಿರುದ್ಧದ ಹೋರಾಟವನ್ನು ಮುಂದುವರಿಸಿರುವ 82 ವರ್ಷದ ಎಲುಬು–ಕೀಲು ತಜ್ಞ ಹಾಗೂ ಕಾಶ್ಮೀರದ ಬಂಡಿಪುರ ಮೂಲದ 33 ವರ್ಷ ವಯಸ್ಸಿನ ಸಮರ ಕಲೆಯ (ಮಾರ್ಷಲ್ ಆರ್ಟ್ಸ್) ಪಟು ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆಯಾದ ‘ಎಲೆ ಮರೆ ಕಾಯಿ’ಗಳಾಗಿದ್ದಾರೆ.

ಉತ್ತರ ಪ್ರದೇಶದ ಕಾಶಿ (ವಾರಾಣಸಿ) ನಗರದ 125 ವರ್ಷ ವಯಸ್ಸಿನ ಯೋಗ ಪಟು ಶಿವಾನಂದ ಅವರು ದೇಶದ ಇತಿಹಾಸದಲ್ಲೇ ‘ಪದ್ಮ’ ಪ್ರಶಸ್ತಿ ಪಡೆದಿರುವ ಅತ್ಯಂತ ಹಿರಿಯ ಎಂದು ಸರ್ಕಾರ ಹೇಳಿದೆ. ‘ಯೋಗ ಸೇವಕ’ ಎಂದೇ ಹೆಸರಾಗಿರುವ ಇವರ ಸೇವೆಗೆ ಪ್ರಶಸ್ತಿ ಸಂದಿದೆ.

ಕಳೆದ ಮೂರು ದಶಕಗಳಿಂದ ಯೋಗ ಅಭ್ಯಾಸದಲ್ಲಿ ತೊಡಗಿರುವ ಇವರು, ಸುತ್ತಮುತ್ತಲಿನ ಅನೇಕರಿಗೆ ಯೋಗದ ಮಹತ್ವವನ್ನು ಹೇಳಿಕೊಡುತ್ತಲೇ ಕಾಶಿಯ ಘಾಟ್‌ಗಳನ್ನು ಸುತ್ತುತ್ತಿದ್ದಾರೆ. ಅಸ್ಸಾಂನ ಸಮಾಜ ಸೇವಕಿ ಶಕುಂತಲಾ ಚೌಧರಿ ಅವರು ಶಿವಾನಂದ ಅವರಂತೆಯೇ ‘ಪದ್ಮಶ್ರೀ’ ಪಡೆದಿರುವ ಮತ್ತೊಬ್ಬ ಶತಾಯುಷಿಯಾಗಿದ್ದಾರೆ. ಆದರೆ, ಇವರ ಸಾಧನೆಯ ಕ್ಷೇತ್ರ ಭಿನ್ನವಾದದ್ದು.

‘ಕಳೆದ ಏಳು ದಶಕಗಳಿಂದ ಮೌನವಾಗಿಯೇ ಜನಸೇವೆಯಲ್ಲಿ ತೊಡಗಿ, ಅದರ ಮೌಲ್ಯವನ್ನು ಹೆಚ್ಚಿಸುತ್ತಿರುವ 102 ವರ್ಷ ವಯಸ್ಸಿನ ಶಕುಂತಲಾ, ಈಶಾನ್ಯ ಭಾರತದಲ್ಲಿ ಗ್ರಾಮ ಸೇವಾ ಕೇಂದ್ರಗಳನ್ನು ಸ್ಥಾಪಿಸಿದವರಲ್ಲಿ ಪ್ರಮುಖರು. ಸ್ತ್ರೀಶಕ್ತಿ ಜಾಗರಣ ಚಳವಳಿ ನಡೆಸುತ್ತಲೇ ಗ್ರಾಮಸ್ಥರ ಸೇವೆ ಸಲ್ಲಿಸುತ್ತಿರುವ ಇವರು, ಮಹಾತ್ಮ ಗಾಂಧಿ ಹಾಗೂ ವಿನೋಬಾ ಭಾವೆ ಅವರ ಅನುಯಾಯಿ.

ಶತಾಯುಷಿಗಳೊಂದಿಗೆ ‘ಪದ್ಮಶ್ರೀ’ಗೆ ಪಾತ್ರರಾಗಿರುವ ಕಾಶ್ಮೀರದ ಬಂಡಿಪೋರಾದ 33 ವರ್ಷ ವಯಸ್ಸಿನ ‘ಸಮರ ಕಲೆಯ ಗುರು’ ಫೈಸಲ್‌ ಅಲಿ ದಾರ್, ಪ್ರಶಸ್ತಿ ಪಡೆದವರಲ್ಲೇ ಅತ್ಯಂತ ಕಿರಿಯರು.

ಬಂಡಿಪೋರಾದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿ ಸಮರ ಕಲೆಯ ಪಟ್ಟುಗಳನ್ನು ಹೇಳಿಕೊಡುವ ಮೂಲಕ ಇದುವರೆಗೆ ಅಂದಾಜು 4,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಗುಜರಾತ್‌ನ ಕಚ್‌ನಲ್ಲಿ ಪ್ರವಾಹ ಸ್ಥಿತಿ ತಲೆದೋರಿದ ಸಂದರ್ಭ ಸಂತ್ರಸ್ತರಿಗಾಗಿ ಬಟ್ಟೆ ಸಂಗ್ರಹಿಸಿಕೊಡಲು ‘ವಸ್ತ್ರ ಬ್ಯಾಂಕ್‌’ ಸ್ಥಾಪಿಸಿ, ಅಗತ್ಯ ನೆರವು ನೀಡಿದ 91 ವರ್ಷ ವಯಸ್ಸಿನ ಪ್ರಭಾ ಬೆನ್‌ ಶಾ ಅವರಿಗೆ ‘ಪದ್ಮಶ್ರೀ’ ಗೌರವ ಸಂದಿದೆ.

ಅಂದಾಜು 20 ಲಕ್ಷ ಮಂದಿ ಪೋಲಿಯೊ ಪೀಡಿತರಿಗೆ ಚಿಕಿತ್ಸೆ ನೀಡಿ ನೆರವಾಗಿದ್ದಲ್ಲದೆ, ಸುಮಾರು 1 ಲಕ್ಷ ಜನ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೆಸರಾಗಿರುವ ವಿಶಾಖಪಟ್ಟಣದ ಸುಂಕರ ವೆಂಕಟ ಆದಿ ನಾರಾಯಣ ರಾವ್‌ ಅವರನ್ನು ‘ಪದ್ಮಶ್ರೀ’ ಅರಸಿ ಬಂದಿದೆ.

ವಿಶಿಷ್ಟ ಸೇವೆ ಸಲ್ಲಿಸಿಯೂ ಎಲೆ ಮರೆ ಕಾಯಿಯಂತೆ ಇದ್ದ ಅನೇಕರು ‘ಪದ್ಮಶ್ರೀ’ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT