ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸಹಾಯದಿಂದಲೇ ಪರಮ್ ಬೀರ್ ಸಿಂಗ್ ಭಾರತ ತೊರೆದಿದ್ದಾರೆ: ಸಂಜಯ್ ರಾವುತ್

Last Updated 2 ನವೆಂಬರ್ 2021, 8:41 IST
ಅಕ್ಷರ ಗಾತ್ರ

ಮುಂಬೈ: ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರು ಪರಾರಿಯಾಗಿಲ್ಲ, ಆದರೆ ದೇಶದಿಂದ ಹೊರಹೋಗುವಂತೆ ಮಾಡಲಾಗಿದೆ. ಕೇಂದ್ರದ ಸಹಾಯವಿಲ್ಲದೆ ಅವರು ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಮಂಗಳವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮ್ ಬೀರ್ ಸಿಂಗ್ ಅವರ ಆರೋಪಗಳ ಆಧಾರದ ಮೇಲೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಕೇಂದ್ರದ ತನಿಖಾ ತಂಡ ಬಂಧಿಸಿದೆ ಮತ್ತು ಇದು 'ಅತ್ಯಂತ ದುರದೃಷ್ಟಕರ ಮತ್ತು ಅನೈತಿಕ' ಎಂದು ರಾವತ್ ಹೇಳಿದ್ದಾರೆ.

ಮಹಾರಾಷ್ಟ್ರ ಪೊಲೀಸರು ದಾಖಲಿಸಿರುವ ಕೆಲವು ಸುಲಿಗೆ ಪ್ರಕರಣಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಪರಮ್ ಬೀರ್ ಸಿಂಗ್ ತನಿಖೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಮುಂಬೈ ಮತ್ತು ನೆರೆಯ ಥಾಣೆಯಲ್ಲಿ ವಿವಿಧ ಸುಲಿಗೆ ಪ್ರಕರಣಗಳಲ್ಲಿ ಅವರ ವಿರುದ್ಧ ಎರಡು ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿದೆ.

ಮಂಗಳವಾರ ಮಾತನಾಡಿದ ರಾವುತ್, 'ಪೊಲೀಸ್ ಮಹಾನಿರ್ದೇಶಕರಿಗೆ ಸಮಾನವಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ದೇಶದಿಂದ ಹೋಗಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲವಿಲ್ಲದೆ ಅವರು ಹಾಗೆ ಮಾಡಲು ಸಾಧ್ಯವಿಲ್ಲ. ಅವರು ಪರಾರಿಯಾಗಿಲ್ಲ, ಆದರೆ ದೇಶದಿಂದ ಅವರು ಹೊರಹೋಗುವಂತೆ ಮಾಡಲಾಗಿದೆ' ಎಂದು ದೂರಿದರು.

'ಆರೋಪಗಳ ಆಧಾರದ ಮೇಲೆ ತನಿಖೆ ನಡೆಸಬಹುದು. ಆದರೆ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಿಚಾರಣೆಯ ಮೊದಲ ದಿನವೇ ದೇಶಮುಖ್ ಅವರನ್ನು ಬಂಧಿಸಿದರು. 'ಎಂವಿಎ ಸರ್ಕಾರದ (ಮಹಾರಾಷ್ಟ್ರ) ಪ್ರಮುಖ ನಾಯಕರನ್ನು ಕಿರುಕುಳ, ಮಾನಹಾನಿ ಮತ್ತು ಕೆಸರೆರಚಾಟದಲ್ಲಿ ತೊಡಗಿಸಿಕೊಳ್ಳಲು ಇದು ಪೂರ್ವ ಯೋಜಿತ ತಂತ್ರ ಎಂದು ನಾನು ಭಾವಿಸುತ್ತೇನೆ' ಎಂದು ರಾಜ್ಯಸಭಾ ಸದಸ್ಯರು ಹೇಳಿದರು.

ದೇಶ್‌ಮುಖ್‌ ಅವರು ದಕ್ಷಿಣ ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ ಪ್ರದೇಶದಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 11.40ರ ವೇಳೆಗೆ ತಮ್ಮ ವಕೀಲರು, ಅವರ ಸಹಾಯಕರ ಜೊತೆಗೆ ಹಾಜರಾದರು. ರಾಜ್ಯ ಪೊಲೀಸ್ ಸಂಸ್ಥೆಯಲ್ಲಿ ನಡೆದ ಸುಲಿಗೆ ದಂಧೆಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೇಶಮುಖ್ ಅವರನ್ನು 12 ಗಂಟೆಗಳ ವಿಚಾರಣೆ ನಡೆಸಿದ ನಂತರ ಸೋಮವಾರ ತಡರಾತ್ರಿ ಇ.ಡಿ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT