ಶನಿವಾರ, ಸೆಪ್ಟೆಂಬರ್ 18, 2021
29 °C
ಸದನದ ಸಂಪ್ರದಾಯಕ್ಕೆ ಪ್ರತಿಭಟನೆ ಮೂಲಕ ಅಪಮಾನ: ಸ್ಪೀಕರ್‌ ಅಸಮಾಧಾನ

ಮುಂಗಾರು ಅಧಿವೇಶನ: ಸಂಸತ್ತಿನಲ್ಲಿ ಮುಗಿಯದ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಗಾಸಸ್ ಮತ್ತು ರೈತರ ಸಮಸ್ಯೆಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಮಾಡಿದ ಪ್ರತಿಭಟನೆಗೆ ಲೋಕಸಭೆ ಮಂಗಳವಾರವೂ ಸಾಕ್ಷಿಯಾಯಿತು. ಎರಡು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದ ನಂತರ ದಿನದ ಕಲಾಪವನ್ನು ಮುಂದೂಡಬೇಕಾಯಿತು. ನ್ಯಾಯಮಂಡಳಿಗಳ ಸುಧಾರಣಾ ಮಸೂದೆ–2021 ಮತ್ತು ಅಗತ್ಯ ರಕ್ಷಣಾ ಸೇವೆಗಳ ಮಸೂದೆ–2021 ಅನ್ನು ವಿರೋಧ ಪಕ್ಷಗಳ ಸದಸ್ಯರ ನಿರಂತರ ಪ್ರತಿಭಟನೆಯ ನಡುವೆಯೇ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. 

ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಐದು ಪ್ರಶ್ನೆಗಳನ್ನು ಮೊದಲ ಮುಂದೂಡಿಕೆಗೂ ಮುನ್ನ ಚರ್ಚಿಸಲಾಯಿತು. ಪ್ರಶ್ನೋತ್ತರ ಸಮಯ ಸುಮಾರು 40 ನಿಮಿಷ ನಡೆಯಿತು. ರೈತರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುತ್ತಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಆದರೆ ಪೆಗಾಸಸ್ ವಿಷಯ ಇಟ್ಟುಕೊಂಡು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸುತ್ತಿರುವ ಸದಸ್ಯರು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಅವರು ಮನವಿ  ಮಾಡಿದರು.  ಪ್ರತಿಭಟನಕಾರರಿಗೆ ಚರ್ಚೆಗಳು ನಡೆಯುವುದು ಬೇಕಿಲ್ಲ ಎಂದ ಅವರು, ಸಂಸತ್ತಿನ ಸಂಪ್ರದಾಯಗಳನ್ನು ಸಂಸದರು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಕೋವಿಡ್ ಲಸಿಕೆಗಾಗಿ ಜುಲೈ 30ರವರೆಗೆ ಕೋ-ವಿನ್‌ನಲ್ಲಿ 43.17 ಕೋಟಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ 62.54ರಷ್ಟು ನೋಂದಣಿ ಸ್ಥಳದಲ್ಲೇ ಆಗಿದೆ. 45.10 ಕೋಟಿ ಲಸಿಕೆಗಳನ್ನೂ ನೀಡಲಾಗಿದೆ ಎಂದು ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ರಾಜ್ಯಸಭೆಗೆ ತಿಳಿಸಿದರು.

***

ಯಾವುದೇ ಮಸೂದೆ ಅಂಗೀಕರಿಸುವ ಮೊದಲು ಸರಿಯಾದ ಚರ್ಚೆಯಾಗಬೇಕು. ಸದನವು ಕ್ರಮಬದ್ಧವಾಗಿ ನಡೆಯದಿರುವಾಗ ಮಸೂದೆ ಅಂಗೀಕರಿಸಬಾರದು

-ಅಧೀರ್ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

***

ಸದನದಲ್ಲಿ ಮಂಡಿಸಿದ ಮಸೂದೆಗಳ ಬಗ್ಗೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವುದು ಸರಿಯಲ್ಲ

-ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ

***

ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

ಮಸೂದೆಗಳು ಅಂಗೀಕಾರ ಆಗುತ್ತಿರುವ ವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿರೋಧ ಪಕ್ಷಗಳ ವರ್ತನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ತಮ್ಮ ನಡವಳಿಕೆ ಮೂಲಕ ಸಂವಿಧಾನ ಮತ್ತು ಶಾಸಕಾಂಗವನ್ನು ಅಪಮಾನಿಸುತ್ತಿವೆ ಎಂದು ದೂರಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಸಚಿವರ ಕೈಯಲ್ಲಿದ್ದ ಕಾಗದಪತ್ರವನ್ನು ಟಿಎಂಸಿ ಸದಸ್ಯರು ಹರಿದುಹಾಕಿದ್ದಾರೆ. ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಅವರು ಮಸೂದೆ ಅಂಗೀಕಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇಂತಹ ವರ್ತನೆ ಮತ್ತು ಟೀಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಧಾನಿ, ಪ್ರತಿಪಕ್ಷಗಳ ನಡವಳಿಕೆಯು ಸಂಸತ್ತು ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕರೆದರು.  

***

ನಾಯ್ಡು ಮನವೊಲಿಕೆ ಯತ್ನ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸುಗಮ ಕಲಾಪ ನಡೆಸುವ ಉದ್ದೇಶದಿಂದ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸಚಿವರಾದ ರಾಜನಾಥ್‌ ಸಿಂಗ್ ಮತ್ತು ಅಮಿತ್ ಶಾ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ಮುಖಂಡರ ಜೊತೆ ಮಾತುಕತೆ ನಡೆಸಿದರು. 

ಎರಡೂ ಸದನಗಳಲ್ಲಿ ಕಲಾಪಗಳು ತೀವ್ರ ಪ್ರತಿಭಟನೆಯ ಕಾರಣ ಹಳಿ ತಪ್ಪಿರುವ ಹಿನ್ನೆಲೆಯಲ್ಲಿ ನಾಯ್ಡು ಮಾತುಕತೆ ನಡೆಸಿದರು. ರಾಜನಾಥ್, ಶಾ, ಪೀಯೂಷ್ ಗೋಯಲ್ ಮತ್ತು ಪ್ರಲ್ಹಾದ ಜೋಶಿ ಅವರೊಂದಿಗೆ ಸೋಮವಾರ ಸಂಜೆ ಮಾತನಾಡಿದ್ದ ನಾಯ್ಡು, ಮಂಗಳವಾರ ಬೆಳಿಗ್ಗೆ ಖರ್ಗೆ ಅವರೊಂದಿಗೆ ಚರ್ಚಿಸಿದರು.

ಸಂಸತ್ತಿನ ಕೋಲಾಹಲಕ್ಕೆ ಒಟ್ಟಾಗಿ ಪರಿಹಾರ ಕಂಡುಕೊಳ್ಳು
ವಂತೆ ಅವರು ಸಲಹೆ ನೀಡಿದರು. ಪೆಗಾಸಸ್ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳುವಂತೆ ಪ್ರತಿಪಕ್ಷಗಳು ಇಟ್ಟಿರುವ ಬೇಡಿಕೆಯನ್ನು ಸರ್ಕಾರ ಒಪ್ಪುತ್ತಿಲ್ಲ. ಈ ಜಿದ್ದಾಜಿದ್ದಿ ಕೊನೆಗೊಳಿಸಲು ಸೌಹಾರ್ದಯುತ ಪರಿಹಾರವನ್ನು ರೂಪಿಸಲು ನಾಯ್ಡು ಎರಡೂ ಕಡೆಯವರನ್ನು ಒಟ್ಟಾಗಿ ಕುಳಿತುಕೊಂಡು ಚರ್ಚಿಸುವಂತೆ ಮನವಿ ಮಾಡಿದರು.

ಗದ್ದಲದ ನಡುವೆಯೇ ರಾಜ್ಯಸಭೆಯು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021 ಅನ್ನು ಅಂಗೀಕರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು