ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಪರೀಕ್ಷೆ: ಯುಪಿಎಸ್‌ಸಿ ಕಾರ್ಯವೈಖರಿಗೆ ಸ್ಥಾಯಿ ಸಮಿತಿ ಆಕ್ಷೇಪ

Last Updated 17 ಮಾರ್ಚ್ 2023, 12:26 IST
ಅಕ್ಷರ ಗಾತ್ರ

ನವದೆಹಲಿ: ಅಧಿಸೂಚನೆ ಹೊರಬಿದ್ದ ದಿನದಿಂದ ಹಿಡಿದು ಫಲಿತಾಂಶ ಪ್ರಕಟಿಸುವವರೆಗೆ ನಾಗರಿಕ ಸೇವಾ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಲು 15 ತಿಂಗಳು ತೆಗೆದುಕೊಂಡಿರುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಕಾರ್ಯವೈಖರಿಗೆ ಸಂಸದೀಯ ಸ್ಥಾಯಿ ಸಮಿತಿಯೊಂದು ಆಕ್ಷೇಪ ವ್ಯಕ್ತಪಡಿಸಿದೆ.

‘ಯಾವುದೇ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರು ತಿಂಗಳಿಗಿಂತ ಹೆಚ್ಚು ಅವಧಿ ತೆಗೆದುಕೊಳ್ಳಬಾರದು’ ಎಂದು ಸಿಬ್ಬಂದಿ, ಸಾರ್ವಜನಿಕರ ದೂರು, ಕಾನೂನು ಹಾಗೂ ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

‘ನೇಮಕಾತಿ ಪ್ರಕ್ರಿಯೆ ದೀರ್ಘಕಾಲದ ವರೆಗೆ ನಡೆಯುವುದು ಹಾಗೂ ವಿಳಂಬಗೊಳ್ಳುವುದು ಅಭ್ಯರ್ಥಿಯೊಬ್ಬರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅವರ ಭವಿಷ್ಯವನ್ನೇ ಹಾಳು ಮಾಡಬಹುದು’ ಎಂದು ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಹೇಳಲಾಗಿದೆ.

‘ಯುಪಿಎಸ್‌ಸಿ, ನೇಮಕಾತಿ ಪ್ರಕ್ರಿಯೆಗೆ ತೆಗೆದುಕೊಳ್ಳುತ್ತಿರುವ ಅವಧಿಯನ್ನು ಕಡಿತಗೊಳಿಸಬೇಕು ಹಾಗೂ ಈ ರೀತಿ ಮಾಡುವಾಗ ಗುಣಮಟ್ಟದೊಂದಿಗೆ ರಾಜಿಯಾಗಬಾರದು’ ಎಂದು ಸಮಿತಿ ಪ್ರತಿಪಾದಿಸಿದೆ.

ಸಿಬ್ಬಂದಿ, ಸಾರ್ವಜನಿಕರ ದೂರುಗಳು ಹಾಗೂ ಪಿಂಚಣಿ ಸಚಿವಾಲಯದ 2023–24ನೇ ಸಾಲಿನ ಅನುದಾನಕ್ಕೆ ಸಂಬಂಧಿಸಿದ ವರದಿಯನ್ನು ಸಮಿತಿ ಈಚೆಗೆ ಪ್ರಕಟಿಸಿದೆ. ಐಎಎಸ್,ಐಪಿಎಸ್‌ ಹಾಗೂ ಭಾರತೀಯ ವಿದೇಶಾಂಗ ಸೇವೆ ಸೇರಿದಂತೆ ಉನ್ನತ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಗಳ ಪ್ರಕ್ರಿಯೆ ಪೂರ್ಣಗೊಳಿಸಲು ತೆಗೆದುಕೊಂಡ ಅವಧಿ ಕುರಿತು ಈ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT