ಗುರುವಾರ , ಜೂನ್ 30, 2022
22 °C

ಪೆಗಾಸಸ್‌ ಕುರಿತು ಐಟಿ ಸಚಿವರ ಹೇಳಿಕೆ: ಹಕ್ಕುಚ್ಯುತಿ ನೋಟಿಸ್‌ ಪರಿಶೀಲನೆ– ನಾಯ್ಡು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಗಾಸಸ್ ವಿಚಾರದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ(ಐಟಿ) ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ನೀಡಲಾಗಿರುವ ಹಕ್ಕುಚ್ಯುತಿ ನೋಟಿಸ್‌ ಕುರಿತು ಪರಿಶೀಲಿಸುತ್ತಿರುವುದಾಗಿ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಗುರುವಾರ ಹೇಳಿದರು.

ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ‘ಹಕ್ಕುಚ್ಯುತಿ ನೋಟಿಸ್‌ನ ಪರಿಶೀಲನೆ ಬಳಿಕ ಸಚಿವರಿಂದ ಸ್ಪಷ್ಟನೆ ಕೇಳಲಾಗುವುದು. ಅದನ್ನು ಅವಲಂಬಿಸಿ ನೋಟಿಸ್‌ ಅನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಹಾಗೂ ಇನ್ನಿಬ್ಬರು ಸಂಸದರು ಸಚಿವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ’ ಎಂದು ನಾಯ್ಡು ಹೇಳಿದರು.

ಪೆಗಾಸಸ್‌ ಕುತಂತ್ರಾಂಶ ಪ್ರಕರಣ ಸಂಬಂಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಕಳೆದ ವರ್ಷ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ವಿರೋಧ ಪಕ್ಷಗಳ ಸಂಸದರು ನೋಟಿಸ್ ನೀಡಿದ್ದಾರೆ.

ಪೆಗಾಸಸ್ ಕುರಿತಂತೆ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಈಗ ನೋಟಿಸ್‌ ನೀಡಲಾಗಿದೆ. ಈ ವರದಿ ಪ್ರಕಾರ, ಕುತಂತ್ರಾಂಶವು ಇಸ್ರೇಲ್‌ ಜೊತೆಗೆ 2017ರಲ್ಲಿ ನಡೆದಿದ್ದ ರಕ್ಷಣಾ ಪರಿಕರ ವಹಿವಾಟಿನ ಭಾಗವೇ ಆಗಿತ್ತು.

ಕಳೆದ ವರ್ಷ ಜುಲೈನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ವೈಷ್ಣವ್‌ ಅವರು, ‘ಪೆಗಾಸಸ್‌ ಕುರಿತು ಅಧಿವೇಶನ ಸಂದರ್ಭದಲ್ಲಿಯೇ ಲೇಖನ ಪ್ರಕಟವಾಗಿರುವುದು ಕಾಕತಾಳೀಯ ಅಲ್ಲ. ಇದನ್ನು ಪ್ರಮುಖವಾಗಿ ಪರಿಗಣಿಸಲು ಆಧಾರಗಳಿಲ್ಲ’ ಎಂದಿದ್ದರು.

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಕಂಪನಿಯು ತಯಾರಿಸುತ್ತಿರುವ ಪೆಗಾಸಸ್‌ ಬೇಹುಗಾರಿಕೆ ತಂತ್ರಾಂಶ ಬಳಸಿ ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ಅದರಲ್ಲಿ ಭಾರತದ ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು