ತುರಾ: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಾಂಗ್ಮಾ ಅವರ ಸ್ವಕ್ಷೇತ್ರ ದಕ್ಷಿಣ ತುರಾದಲ್ಲಿನ ಪಿ.ಎ. ಸಂಗ್ಮಾ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಚುನಾವಣಾ ರ‍್ಯಾಲಿ ಆಯೋಜಿಸಲು ಬಿಜೆಪಿಗೆ ಕ್ರೀಡಾ ಇಲಾಖೆಯು ಅನುಮತಿ ನಿರಾಕರಿಸಿದೆ.
ನಿರ್ಮಾಣ ಕಾಮಗಾರಿ ನೆಪವಾಗಿಸಿ ಅನುಮತಿ ನಿರಾಕರಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಉದ್ಘಾಟನೆಯಾದ ಕೇವಲ ಎರಡು ತಿಂಗಳಲ್ಲೇ ಪ್ರಧಾನಿಯವರ ರ‍್ಯಾಲಿಗೆ ಕ್ರೀಡಾಂಗಣ ‘ಅಪೂರ್ಣ ಮತ್ತು ಲಭ್ಯವಿಲ್ಲ’ವೆಂದು ಹೇಗೆ ಘೋಷಿಸಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಅವರು ಪ್ರಶ್ನಿಸಿದ್ದಾರೆ.
₹127 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕ್ರೀಡಾಂಗಣವನ್ನು ಕಳೆದ ವರ್ಷ ಡಿಸೆಂಬರ್ 16ರಂದು ಮುಖ್ಯಮಂತ್ರಿ ಉದ್ಘಾಟಿಸಿದ್ದರು.
‘ಕ್ರೀಡಾಂಗಣದಲ್ಲಿ ನಿರ್ಮಾಣ ಕೆಲಸಗಳು ಇನ್ನೂ ನಡೆಯುತ್ತಿದ್ದು, ನಿರ್ಮಾಣ ಸಾಮಗ್ರಿಗಳೂ ಸ್ಥಳದಲ್ಲೇ ಇವೆ. ಸುರಕ್ಷತೆಯ ದೃಷ್ಟಿಯಲ್ಲಿ ಕ್ರೀಡಾಂಗಣವು ಅಷ್ಟೊಂದು ದೊಡ್ಡ ರ‍್ಯಾಲಿಗೆ ಸೂಕ್ತವಾಗಿಲ್ಲವೆಂದು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ. ಪರ್ಯಾಯ ಸ್ಥಳವಾಗಿ ಅಲೋಟ್ರೆ ಕ್ರಿಕೆಟ್ ಕ್ರೀಡಾಂಗಣವನ್ನು ಪರಿಗಣಿಸಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಸ್ವಪ್ನಿಲ್ ತೆಂಬೆ ತಿಳಿಸಿದರು.
ಇದೇ 24 ರಂದು ಶಿಲ್ಲಾಂಗ್ ಮತ್ತು ತುರಾದಲ್ಲಿ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ವೇಳಾಪಟ್ಟಿ ನಿಗದಿಯಾಗಿತ್ತು. ಅಂದು ಪಿಂಥೋರುಮ್‌ಕ್ರಾಹ್ ಕ್ಷೇತ್ರದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಎ.ಎಲ್. ಹೆಕ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.