ಸೋಮವಾರ, ಅಕ್ಟೋಬರ್ 18, 2021
24 °C

ಮದುವೆ ಸಮಾರಂಭಗಳಲ್ಲಿ ಕುದುರೆಗಳ ಬಳಕೆಯು ಹಿಂಸಾಪ್ರವೃತ್ತಿ: ಪೇಟಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಪ್ರಾಣಿದಯಾ ಸಂಘ(ಪೇಟಾ) ಆಕ್ಷೇಪ ವ್ಯಕ್ತಪಡಿಸಿದೆ.

ಕುದುರೆಗಳನ್ನು ದುರುಪಯೋಗಪಡಿಸಲಾಗುತ್ತಿದೆ ಮತ್ತು ಇದೊಂದು ಹಿಂಸಾಪ್ರವೃತ್ತಿಯಾಗಿದೆ ಎಂದು ಪೇಟಾ ಟ್ವೀಟ್‌ ಮಾಡಿದೆ.

ಕುದುರೆಗಳನ್ನು ನಿಯಂತ್ರಿಸಲು ಪ್ರಮುಖವಾಗಿ ಬಾಯಿಗೆ ಬಿಗಿಯುವ ಚೂಪಾದ ಮುಳ್ಳುಗಳಿಂದ ಕೂಡಿದ ಕಡಿವಾಣದ ಬಳಕೆ ಬಗ್ಗೆ ಪೇಟಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮುಳ್ಳುಗಳಿಂದ ಕೂಡಿದ ಕಡಿವಾಣದ ಬಳಕೆಯಿಂದ ಕುದುರೆಗಳ ಬಾಯಿಯಲ್ಲಿ ಗಾಯವಾಗಿ ನೋವುಂಟು ಮಾಡುತ್ತದೆ. ಹಲವು ಸಂದರ್ಭಗಳಲ್ಲಿ ಗಾಯವು ಶಾಶ್ವತವಾಗಿ ಉಳಿದು ಸದಾ ನೋವಿನಿಂದ ನರಳುವಂತಾಗುತ್ತದೆ. ತರಬೇತಿ ನೀಡುವ ಸಂದರ್ಭದಲ್ಲಿ ಹೊಡೆದು ಹಿಂಸಿಸಲಾಗುತ್ತಿದೆ. ಮದುವೆ ಮೆರವಣಿಗೆಯಲ್ಲಿ ಕುದುರೆಗಳಿಗೆ ನೃತ್ಯ ಮಾಡುವಂತೆ, ಪ್ರದರ್ಶನ ನೀಡುವಂತೆ ಅಥವಾ ಸಾಕಷ್ಟು ಜನಗಳಿರುವ ಮತ್ತೆ ಗಲಭೆಗಳ ಮಧ್ಯೆ ಸಹಿಸಿಕೊಂಡು ನಿಲ್ಲುವಂತೆ ಮಾಡಲು ಕುದುರೆಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಪೇಟಾ ಹೇಳಿದೆ.

ಕುದುರೆಗಳು ಶಬ್ದಕ್ಕೆ ಹೆದರಿಕೊಳ್ಳುತ್ತವೆ. ಆದರೆ ಸಮಾರಂಭಗಳಲ್ಲಿ ಸಾಕಷ್ಟು ಸದ್ದು-ಗದ್ದಲವಿರುತ್ತದೆ. ಪಟಾಕಿಗಳನ್ನು ಸಿಡಿಸಲಾಗುತ್ತದೆ. ಧ್ವನಿವರ್ಧಕಗಳ ಮೂಲಕ ಸಂಗೀತ ಹಾಕಲಾಗುತ್ತದೆ. ಶುಚಿತ್ವವಿಲ್ಲದ ಕಡೆಗಳಲ್ಲಿ ಕಟ್ಟಿ ಹಾಕಲಾಗುತ್ತದೆ. ಇದರಿಂದ ನೋಣಗಳು ಮುತ್ತಿಕೊಳ್ಳುತ್ತವೆ. ಇಂತಹ ತೊಂದರೆಗಳಿಂದ ಕುದುರೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತವೆ ಎಂದು ಪೇಟಾ ವಿವರಿಸಿದೆ.

ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಬಳಸುವುದಿಲ್ಲ ಎಂದು ವಾಗ್ದಾನ ನೀಡಿ ಎಂದು ಪೇಟಾ ಕರೆ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವನಿವೃತ್ತ ಐಪಿಎಸ್‌ ಅಧಿಕಾರಿ ಎಂ.ನಾಗೇಶ್ವರ ರಾವ್‌ ಅವರು, ಪೇಟಾದ ಹೋರಾಟ ಹಿಂದುತ್ವ ವಿರೋಧಿ ಮತ್ತು ಭಾರತ ವಿರೋಧಿಯಾಗಿದೆ. ಪೇಟಾಗೆ ನೀಡಿರುವ ಅನುಮೋದನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಅಧೀನ ಇಲಾಖೆ ಕಾರ್ಪೊರೇಟ್‌ ಸಂವಹನ ಮತ್ತು ವಿದೇಶಿ ವ್ಯವಹಾರ ಸಚಿವಾಲಯದ ಜಂಟೆ ಕಾರ್ಯದರ್ಶಿ ಪ್ರೀತಿ ಕೌಶಿಕ್‌ ಬ್ಯಾನರ್ಜಿ ಅವರನ್ನು ಟ್ಯಾಗ್‌ ಮಾಡಿ ಮನವಿ ಮಾಡಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಕುದುರೆಗಳನ್ನು ಬಳಸಲಾಗುತ್ತದೆ. ವರ ಕುದುರೆಯನ್ನು ಏರಿ ಬರುವುದು ಪ್ರತಿಷ್ಠೆ ಎಂದೂ ಬಿಂಬಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮದುವೆ ದಿನ ವರ ಕುದುರೆ ಮೇಲೆ ಕುಳಿತು ಮೆರವಣಿಗೆ ಮಾಡಿದ್ದಕ್ಕೆ ದಲಿತರ ಮೇಲೆ ಬಹಿಷ್ಕಾರ ಹಾಕಿದ ಘಟನೆ ಅಹಮದಾಬಾದ್‌ನಲ್ಲಿ ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು