ಮಂಗಳವಾರ, ಜನವರಿ 26, 2021
27 °C

ಮಂಡನೆಗೆ ಮೊದಲು ‌ಕರಡು ಮಸೂದೆ; ‌ಸಾರ್ವಜನಿಕ ಪ್ರಕಟಣೆ ಕೋರಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸಾರ್ವಜನಿಕ ಚರ್ಚೆ ಮತ್ತು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ಇರುವಂತೆ ಮಸೂದೆಗಳ ಕರಡನ್ನು ಶಾಸನಸಭೆಯಲ್ಲಿ ಮಂಡಿಸುವ 60 ದಿನ ಮೊದಲು ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದು, ನೀತಿಗಳ ಪೂರ್ವಭಾವಿ ಚರ್ಚೆ ಕುರಿತಂತೆ 2014ರ ಜನವರಿ 10ರಂದು ನಡೆದಿದ್ದ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಕಾರ್ಯದರ್ಶಿಗಳ ಸಭೆ ತೀರ್ಮಾನ ಜಾರಿಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೃಷಿ ಕಾಯ್ದೆಗಳ ಕುರಿತು ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಕೊಂಡಿರುವಂತೆಯೇ ಈ ಅರ್ಜಿ ಸಲ್ಲಿಕೆಯಾಗಿದೆ.

‘ಎರಡು ತಿಂಗಳು ಮಸೂದೆ ಕುರಿತು ಸಾರ್ವಜನಿಕವಾಗಿ ವಿಸ್ತೃತ ಚರ್ಚೆ ನಡೆದರೆ ಪ್ರತಿ ಅಂಶದ ವಿಶ್ಲೇಷಣೆ ಸಾಧ್ಯ. ಶಾಸನಸಭೆಗಳಲ್ಲಿ ಮಸೂದೆ ಚರ್ಚೆಗೆ ಬಂದಾಗ ಜನಪ್ರತಿನಿಧಿಗಳೂ ಉತ್ತಮ ಸಲಹೆ ನೀಡಬಹುದು. ಮಸೂದೆಯನ್ನು ಎಲ್ಲ ಭಾಷೆಗಳಲ್ಲಿ ಪ್ರಕಟಿಸಿದಲ್ಲಿ ಎಲ್ಲ ವರ್ಗಗಳಿಂದಲೂ ಸಲಹೆಗಳು ಬರಲಿವೆ’ ಎಂದು ಅರ್ಜಿಯಲ್ಲಿ ಅಭಿಪ್ರಾಯಪಡಲಾಗಿದೆ.

‘ಇಂಥ ಕ್ರಮದಿಂದ ಕಾಯ್ದೆ ಜಾರಿಯಾದಾಗ ಪ್ರಶ್ನಿಸುವುದು ತಪ್ಪಲಿದೆ. ಅಲ್ಲದೆ, ಪ್ರಶ್ನೆ ಮಾಡಿದ ಸಂದರ್ಭದಲ್ಲಿ ನೀವು ಏಕೆ ಮೊದಲೇ ಸರ್ಕಾರಕ್ಕೆ ಸಲಹೆ ನೀಡಲಿಲ್ಲ ಎಂದು ಅರ್ಜಿದಾರರಿಗೆ ಪ್ರಶ್ನಿಸಲು ಅವಕಾಶವಿದೆ. ಇಂಥ ಕ್ರಮಗಳು ಪರಿಣಾಮಕಾರಿಯಷ್ಟೇ ಅಲ್ಲ, ಪಾರದರ್ಶಕವೂ ಹೌದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಸದೃಢಪಡಿಸಲಿದೆ’ ಎಂದು ಅರ್ಜಿದಾರರು ಸಲಹೆ ಮಾಡಿದ್ದಾರೆ.

ಕರಡು ಮಸೂದೆಯನ್ನು ಮಂಡನೆಗೆ ಪೂರ್ವದಲ್ಲಿ ಪ್ರಕಟಿಸದಿರುವ ಕಾರಣ, ಈ ಕುರಿತು ತಪ್ಪು ಗ್ರಹಿಕೆಗಳಿಗೆ ಆಸ್ಪದವಾಗಿದೆ. ಕೃಷಿಕರು ಪ್ರತಿಭಟಿಸುತ್ತಿದ್ದಾರೆ. ರಾಜಕೀಯ ಶಕ್ತಿಗಳು ರೈತರ ಪ್ರತಿಭಟನೆಯನ್ನು ತಮ್ಮ ಹಿತಾಸಕ್ತಿ ಸಾಧನೆಗೆ ಬಳಸಿಕೊಳ್ಳುತ್ತಿವೆ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು