ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯಗಳ ಆವರಣದಲ್ಲಿ ಭದ್ರತೆ; ಸರ್ಕಾರಗಳಿಗೆ ನಿರ್ದೇಶನ ಕೋರಿ ಸುಪ್ರೀಂಗೆ ಅರ್ಜಿ

Last Updated 25 ಸೆಪ್ಟೆಂಬರ್ 2021, 22:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಇರುವ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿನ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್‌ನಲ್ಲಿ ಶನಿವಾರ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.

ಇಲ್ಲಿನ ರೋಹಿಣಿಯ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಕುಖ್ಯಾತ ರೌಡಿ ಜಿತೇಂದರ್ ಗೋಗಿಯ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯಗಳ ಆವರಣದಲ್ಲಿ ತಕ್ಷಣವೇ ಭದ್ರತೆಗೆ ಆದ್ಯತೆ ನೀಡಲು ಸೂಚಿಸುವಂತೆ ಕೋರಿ ವಕೀಲರಾದ ರಾಬಿನ್ ರಾಜು, ಬ್ಲೆಸನ್ ಮ್ಯಾಥ್ಯೂ, ವಿಶಾಲ್ ತಿವಾರಿ, ದೀಪಾ ಜೋಸೆಫ್ ಮತ್ತಿತರರು ಅರ್ಜಿ ಸಲ್ಲಿಸಿದ್ದಾರೆ.

ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರ ಭದ್ರತೆಯ ದೃಷ್ಟಿಯಿಂದ ರೌಡಿಗಳು ಹಾಗೂ ಕುಖ್ಯಾತ ಅಪರಾಧಿಗಳನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸದೆ, ಕಾರಾಗೃಹದಲ್ಲೇ ಇರಿಸಿ, ವಿಡಿಯೊ ಕಾನ್ಫರನ್ಸ್ ಮೂಲಕ ಅವರ ವಿಚಾರಣೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನ್ಯಾಯಾಧೀಶರಿಗೆ ಭದ್ರತೆ ನೀಡಿದಂತೆಯೇ, ನ್ಯಾಯಾಲಯಗಳ ಆವರಣದಲ್ಲಿ ಉಗ್ರರು ಹಾಗೂ ರೌಡಿಗಳ ಸಂಭವನೀಯ ದಾಳಿಯನ್ನು ತಪ್ಪಿಸಲು ಆದ್ಯತೆ ನೀಡಬೇಕು. ನ್ಯಾಯಾಲಯಗಳ ಪ್ರವೇಶ ದ್ವಾರದಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಸಹಕಾರ ನೀಡಲು ತನ್ನ ಸದಸ್ಯರಿಗೆ ಸೂಚಿಸುವಂತೆ ಎಲ್ಲ ಜಿಲ್ಲಾ ವಕೀಲರ ಸಂಘಗಳಿಗೆ ಸಲಹೆ ನೀಡುವಂತೆಯೂ ಆಗ್ರಹಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳ ಎದುರು ಅಧಿಕ ಜನಸಂದಣಿ ಕಂಡುಬರುತ್ತಿದ್ದು, ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಎಲ್ಲ ನ್ಯಾಯಾಲಯಗಳ ಆವರಣದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಶಸ್ತ್ರಸಜ್ಜಿತ ಪೊಲೀಸರನ್ನು ನಿಯುಕ್ತಗೊಳಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ದೇಶದ ವಿವಿಧ ನ್ಯಾಯಾಲಯಗಳ ಆವರಣದಲ್ಲಿ ಈ ಹಿಂದೆಯೂ ದಾಳಿ ನಡೆದ ಸಂದರ್ಭ ಭದ್ರತೆಯ ಬಗ್ಗೆ ಗಮನ ಹರಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಬಾಕಿ ಇದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

ರೋಹಿಣಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಕೀಲರ ವೇಷದಲ್ಲಿ ಬಂದ ದುಷ್ಕರ್ಮಿಗಳಿಬ್ಬರು, ವಿಚಾರಣೆಗೆ ಹಾಜರಾಗಿದ್ದ ಕುಖ್ಯಾತ ರೌಡಿ ವಿಜೇಂದರ್‌ ಮಾನ್‌ ಗೋಗಿಯನ್ನು ಕೋರ್ಟ್‌ ಹಾಲ್‌ನಲ್ಲೇ ಗುಂಡಿಟ್ಟು ಹತ್ಯೆ ಮಾಡಿದ್ದರು. ನಂತರ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಸಾವಿಗೀಡಾಗಿದ್ದರು.

ಕಲಾಪ ಬಹಿಷ್ಕರಿಸಿದ ವಕೀಲರು:ರೋಹಿಣಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಗುಂಡಿನ ದಾಳಿಯ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಶನಿವಾರ ದೆಹಲಿಯ ಬಹುತೇಕ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರು ಕಲಾಪ ಬಹಿಷ್ಕರಿಸಿದರು.

ಇಲ್ಲಿನ ಎಲ್ಲ ಏಳು ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಮಾಡುವಂತೆ ಕೋರಿ ಕಲಾಪ ಬಹಿಷ್ಕರಿಸಲಾಯಿತು. ಕೆಲವು ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣಗಳ ವಿಚಾರಣೆಯಿಂದ ವಕೀಲರು ದೂರ ಉಳಿದರು ಎಂದು ದೆಹಲಿಯ ಜಿಲ್ಲಾ ನ್ಯಾಯಾಲಯಗಳ ವಕೀಲರ ಸಂಘಗಳ ಸಮನ್ವಯ ಸಮಿತಿಯ ವಕ್ತಾರ ಎನ್‌.ಸಂಜೀವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT