ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ದಾನಕ್ಕೆ ಮುಂದಾಗಿ: ಪ್ರಧಾನಿ ಮನವಿ

99ನೇ ‘ಮನ್ ಕಿ ಬಾತ್‌’ನಲ್ಲಿ ಅಂಗಾಂಗ ದಾನದ ಮಹತ್ವದ ಸಾರಿದ ಮೋದಿ
Last Updated 27 ಮಾರ್ಚ್ 2023, 5:36 IST
ಅಕ್ಷರ ಗಾತ್ರ

ನವದೆಹಲಿ: ‘ಒಬ್ಬರ ಜೀವವನ್ನು ಉಳಿಸುವ ಅಂಗಾಂಗ ದಾನಕ್ಕೆ ಜನರು ಹೆಚ್ಚು ಗಮನ ಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್‌’ನ 99ನೇ ಸಂಚಿಕೆಯಲ್ಲಿ ಭಾನುವಾರ ಮನವಿ ಮಾಡಿದ್ದಾರೆ.

‘ಅಂಗಾಂಗ ದಾನಕ್ಕೆ ಸರ್ಕಾರವು ಏಕರೂಪದ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಾನ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ‘ತಮ್ಮ ಸಾವಿನ ಬಳಿಕ ಅಂಗಾಂಗ ದಾನ ಮಾಡುವವರನ್ನು ಅಂಗಾಂಗ ಸ್ವೀಕಾರ ಮಾಡುವವರು ‘ದೇವರು’ ಎಂದೇ ಭಾವಿಸುತ್ತಾರೆ. ಹಾಗಾಗಿ ಹಲವರಿಗೆ ಜೀವ ಮತ್ತು ಬದುಕು ನೀಡುವ ಈ ಕಾರ್ಯಕ್ಕೆ ಜನರಿಂದ ಉತ್ತೇಜನ ದೊರೆಯಬೇಕು’ ಎಂದೂ ಅವರು ಹೇಳಿದ್ದಾರೆ.

‘ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಉಂಟಾಗುತ್ತಿರುವುದು ಸಮಾಧಾನಕರ ಅಂಶ’ ಎಂದು ಶ್ಲಾಘಿಸಿದ ಮೋದಿ, ಅಗತ್ಯವಿರುವವರು ದೇಶದಲ್ಲಿ ಎಲ್ಲಿ ಬೇಕಾದರೂ ಅಂಗಾಂಗಗಳನ್ನು ಸ್ವೀಕರಿಸಲು ಇದ್ದ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಅಂಗಾಂಗ ದಾನ ಮಾಡಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಬ್ಬ ಮೃತ ವ್ಯಕ್ತಿಯ ಅಂಗಾಂಗ ದಾನವು 8ರಿಂದ 9 ಜನರಿಗೆ ಸಹಾಯಕವಾಗಬಲ್ಲದು’ ಎಂದು ವಿವರಿಸಿದ್ದಾರೆ.

‘ದೇಶದಲ್ಲಿ 2013ರಲ್ಲಿ ಅಂಗಾಂಗ ದಾನಿಗಳ ಸಂಖ್ಯೆ 5 ಸಾವಿರಕ್ಕಿಂತಲೂ ಕಡಿಮೆ ಇತ್ತು. 2022ರಲ್ಲಿ ಈ ಸಂಖ್ಯೆಯು 15 ಸಾವಿರಕ್ಕೇರಿದೆ’ಎಂದರು.

ಜನಿಸಿದ 39 ದಿನಗಳ ಬಳಿಕ ಸಾವಿಗೀಡಾದ ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಿದ ಅಮೃತಸರದ ದಂಪತಿ ಜತೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ಅವರ ನಿರ್ಧಾರವನ್ನು ಶ್ಲಾಘಿಸಿದರು.

ಕೆಲವೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಅವರು, ಈ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.

ಕಾಶಿಯಲ್ಲಿ ‘ಕಾಶಿ–ತಮಿಳು ಸಂಗಮಂ’ ನಡೆದಿದೆ. ಅಂತೆಯೇ ಏಪ್ರಿಲ್ 17ರಿಂದ 30ರ ತನಕ ಗುಜರಾತ್‌ನ ವಿವಿಧ ಭಾಗಗಳಲ್ಲಿ ‘ಸೌರಾಷ್ಟ್ರ– ತಮಿಳು ಸಂಗಮಂ’ ನಡೆಯಲಿದೆ ಎಂದು ಮಾಹಿತಿ ನೀಡಿದರು.‌

ಮುಂದಿನ ತಿಂಗಳು ‘ಮನ್ ಕಿ ಬಾತ್’ ಮಾಸಿಕ ಕಾರ್ಯಕ್ರಮದ 100ನೇ ಸಂಚಿಕೆ ನಡೆಯಲಿದ್ದು, ಜನರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆಯೂ ಮೋದಿ ಮನವಿ ಮಾಡಿದ್ದಾರೆ.

ಬಾಕ್ಸ್

ನಾರಿಶಕ್ತಿಯ ಶ್ಲಾಘನೆ

ನವದೆಹಲಿ: ‘ಮನ್ ಕಿ ಬಾತ್’ ಮಾಸಿಕ ರೇಡಿಯೊ ಕಾರ್ಯಕ್ರಮದಲ್ಲಿ ಭಾರತದ ನಾರಿಶಕ್ತಿಯ ಬಗ್ಗೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದರು.

‘ಏಷ್ಯಾದ ಮೊದಲ ಮಹಿಳಾ ಲೋಕೊಪೈಲಟ್ ಸುರೇಖಾ ಯಾದವ್ ಅವರು, ಹೊಸದಾಗಿ ಪರಿಚಯಿಸಿರುವ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲನ್ನು ಚಾಲನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತೆಯೇ, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಮೂಲಕ ನಿರ್ಮಾಪಕಿ ‌ಗುನೀತ್ ಮೊಂಗಾ ಹಾಗೂ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟರ್ಕಿಯಲ್ಲಿ ಸಂಭವಿಸಿದ ಭೂಕಂಪ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತವು ಕಳುಹಿಸಿದ್ದ ಎನ್‌ಡಿಆರ್‌ಎಫ್ ತಂಡದಲ್ಲಿದ್ದ ಮಹಿಳೆಯರ ಪಾತ್ರವನ್ನು ಶ್ಲಾಘಿಸಿದ ಮೋದಿ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾರತ ಮಾತ್ರ ಮಹಿಳಾ ತುಕಡಿಯನ್ನು ನಿಯೋಜಿಸಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT