ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ಮತ್ತೊಮ್ಮೆ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

Last Updated 16 ಫೆಬ್ರುವರಿ 2021, 15:59 IST
ಅಕ್ಷರ ಗಾತ್ರ

ಲಖನೌ: ರೈತರ ಪ್ರತಿಭಟನೆ ಬೆಂಬಲಿಸುವ ಟೂಲ್‌ಕಿಟ್‌ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದು ವಿವಾದಕ್ಕೆ ತಿರುಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

‘ರಾಜ್‌ಭರ್’ (ಒಬಿಸಿ) ಸಮುದಾಯದ ಆದರ್ಶ ಪುರುಷ ರಾಜ ಸುಹೇಲ್ದೇವ್ ಅವರ ಪ್ರತಿಮೆಗೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸುಭಾಷ್‌ಚಂದ್ರ ಬೋಸ್‌, ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌, ಅಂಬೇಡ್ಕರ್‌ ಅವರಂತಹ ಮಹನೀಯರಿಗೆ ಹಿಂದಿನ ಸರ್ಕಾರಗಳು ಸೂಕ್ತ ಗೌರವ ನೀಡಿರಲಿಲ್ಲ’ ಎಂದು ಆರೋಪಿಸಿದ ಅವರು, ‘ಹಿಂದಿನ ಆಡಳಿತಗಳ ತಪ್ಪುಗಳನ್ನು ನಾವು ಸರಪಡಿಸುತ್ತಿದ್ದೇವೆ’ ಎಂದು ಹೇಳಿದರು.

ಹೊಸ ಕೃಷಿ ಕಾನೂನುಗಳಿಂದಾಗಿ ರೈತರು ತಮ್ಮ ಭೂಮಿ ಕಳೆದುಕೊಳ್ಳಲಿದ್ದಾರೆ ಎಂದು ಈ ಕಾಯ್ದೆಗಳ ವಿರೋಧಿಗಳು ಸುಳ್ಳು ಹಬ್ಬಿಸುತ್ತಿದ್ದಾರೆ. ಆದರೆ, ಈ ಹೊಸ ಕಾಯ್ದೆಗಳಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಕೃಷಿ ಕಾಯ್ದೆಗಳಿಂದ ಉತ್ತರಪ್ರದೇಶದ ರೈತರು ಉತ್ತೇಜಕ ಫಲಿತಾಂಶ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಹೊಸ ಕಾಯ್ದೆಗಳು ತಮ್ಮ ಬದುಕು ಸುಧಾರಿಸಲಿವೆ ಎನ್ನುವುದನ್ನು ಅರಿತಿರುವ ರೈತರು, ಈ ಕಾಯ್ದೆಗಳ ವಿರೋಧಿಗಳು ಹಬ್ಬಿಸುತ್ತಿರುವ ಸುಳ್ಳುಗಳನ್ನು ಬಯಲುಗೊಳಿಸುತ್ತಿದ್ದಾರೆ. ಹಿಂದೆ ವಿದೇಶಿ ಕಂಪನಿಗಳನ್ನು ದೇಶದೊಳಕ್ಕೆ ತರಲು ಕಾನೂನುಗಳನ್ನು ರೂಪಿಸಿದವರು,ಈಗ ಸ್ಥಳೀಯ ಕಂಪನಿಗಳ ಬಗ್ಗೆ ರೈತರಲ್ಲಿ ಹೆದರಿಕೆ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಈ ವರ್ಷ ಉತ್ತರಪ್ರದೇಶದಲ್ಲಿ 65 ಲಕ್ಷ ಟನ್ ಭತ್ತ ಖರೀದಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು. ಹಾಗೆಯೇ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸಲು ಕೇಂದ್ರವು ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವು ನೀಡಿದೆ ಎಂದರು.

ಉತ್ತರಪ್ರದೇಶದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರಾಜ್‌ಭರ್ ಸಮುದಾಯದ ಜನಸಂಖ್ಯೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು ಸುಹೇಲ್ದೇವ್ ಅವರ ಪ್ರತಿಮೆಗೆ ಅಡಿಪಾಯ ಹಾಕುತ್ತಿರುವುದು ರಾಜಕೀಯ ಮಹತ್ವವನ್ನೂ ಪಡೆದುಕೊಂಡಿದೆ. 2019ರ ಲೋಕಸಭೆ ಚುನಾವಣೆಗೂ ಮೊದಲು ಮಿತ್ರಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಮೈತ್ರಿ ಕಡಿದುಕೊಂಡಿರುವುದರಿಂದ ರಾಜ್‌ಭರ್‌ ಸಮುದಾಯವನ್ನು ಸೆಳೆಯಲು ಬಿಜೆ‍ಪಿ ಪ್ರಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT