ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿಭಜಿಸಿದ ಮೋದಿ: ಟಿಕಾಯತ್‌ ಟೀಕೆ

ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾಯ್ದೆ ಜಾರಿ ಮಾಡಿ: ಮಹಾಪಂಚಾಯಿತಿಯಲ್ಲಿ ಒತ್ತಾಯ
Last Updated 22 ನವೆಂಬರ್ 2021, 20:15 IST
ಅಕ್ಷರ ಗಾತ್ರ

ಲಖನೌ: ಕೇಂದ್ರ ಸರ್ಕಾರವು ರೈತರನ್ನು‍ ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್‌ ಟಿಕಾಯತ್‌ ಆರೋಪಿಸಿದ್ದಾರೆ. ‘ರೈತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸರ್ಕಾರವು ರೈತರ ಜತೆ ಮಾತುಕತೆ ನಡೆಸಬೇಕು. ಇಲ್ಲವಾದರೆ ನಾವು ಹೋಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಅವರಿಗೆ ಅರ್ಥ ಮಾಡಿಸಲು ನಮಗೆ ಒಂದು ವರ್ಷ ಬೇಕಾಯಿತು. ನಮಗೆ ಏನು ಬೇಕು ಎಂಬುದನ್ನು ನಮ್ಮ ಭಾಷೆಯಲ್ಲಿ ಹೇಳಿದೆವು. ಆದರೆ, ದೆಹಲಿಯಲ್ಲಿ ಹೊಳೆಯುವ ಬಂಗಲೆಗಳಲ್ಲಿ ಇರುವವರಿಗೆ ನಮ್ಮ ಭಾಷೆ ಅರ್ಥ ಆಗಲಿಲ್ಲ’ ಎಂದು ಲಖನೌದಲ್ಲಿ ಸೋಮವಾರ ನಡೆದ ಮಹಾಪಂಚಾಯಿತಿಯಲ್ಲಿ ಅವರು
ಹೇಳಿದರು.

‘ಈ ಕಾಯ್ದೆಗಳು ಹಾನಿಕಾರಕ ಎಂದು ಒಂದು ವರ್ಷದಲ್ಲಿ ಅವರಿಗೆ ಅರ್ಥವಾಯಿತು. ಹಾಗಾಗಿ, ಅವುಗಳನ್ನು ವಾ‍ಪಸ್‌ ಪಡೆಯಲು ನಿರ್ಧರಿಸಿದರು. ಕಾಯ್ದೆ ಹಿಂದಕ್ಕೆ ಪಡೆಯುವ ನಿರ್ಧಾರ ಒಳ್ಳೆಯದು. ಆದರೆ, ಕೆಲವು ರೈತರಿಗೆ ಅರ್ಥ ಮಾಡಿಸಲು ವಿಫಲವಾದೆವು ಎಂದು ಹೇಳುವ ಮೂಲಕ ರೈತರನ್ನು ವಿಭಜಿಸಲು ಯತ್ನಿಸಿದರು. ಆ ಕೆಲವು ರೈತರು ನಾವೇ’ ಎಂದು ಟಿಕಾಯತ್‌ ವಿವರಿಸಿದರು.

ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸಿದಾಗ, ಕಾಯ್ದೆಗಳನ್ನು ಒಂದು ವರ್ಗದ ರೈತರಿಗೆ ಮನದಟ್ಟು ಮಾಡಲು ಸಾಧ್ಯವಾಗಲಿಲ್ಲ ಎಂದು ದೇಶದ ಜನರ ಕ್ಷಮೆ ಕೋರಿದ್ದನ್ನು ಉಲ್ಲೇಖಿಸಿ ಟಿಕಾಯತ್‌ ಹೀಗೆ ಹೇಳಿದ್ದಾರೆ.

‘ಕದನವಿರಾಮ ಘೋಷಣೆ ಮಾಡಿದ್ದು ಸರ್ಕಾರವೇ ವಿನಾ ರೈತರು ಅಲ್ಲ. ರೈತರ ಮುಂದೆ ಇನ್ನೂ ಹಲವು ಸಮಸ್ಯೆಗಳು ಇವೆ. ಹೋರಾಟವು ಮುಂದುವರಿಯಲಿದೆ. ರೈತರ ಜತೆಗೆ ಸರ್ಕಾರವು ಮಾತನಾಡಬೇಕು. ಇಲ್ಲವಾದರೆ ನಾವು ಹೋಗುವುದಿಲ್ಲ. ದೇಶದಾದ್ಯಂತ ಸಭೆಗಳನ್ನು ನಡೆಸಿ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಜನರಿಗೆ ಹೇಳುತ್ತೇವೆ’ ಎಂದರು.

ಎಂಎಸ್‌ಪಿ ಖಾತರಿಗೆ ಕಾಯ್ದೆ ಬೇಕು ಎಂಬ ಶಿಫಾರಸು ಇದ್ದ ವರದಿಯನ್ನು ಮೋದಿ ಅವರಿಗಿಂತ ಮೊದಲು
ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರಿಗೆ ಸಲ್ಲಿಸಲಾಗಿತ್ತು. ಈ ವರದಿ ಸಿದ್ಧಪಡಿಸಿದ ಸಮಿತಿಯಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರೂ ಇದ್ದರು. ಈ ವರದಿ ಪ್ರಧಾನಿ ಕಾರ್ಯಾಲಯದಲ್ಲಿ ಈಗಲೂ ಇದೆ. ಹಾಗಾಗಿ, ಈಗ ಹೊಸ ಸಮಿತಿಯ ಅಗತ್ಯ ಇಲ್ಲ. ಹೊಸ ಸಮಿತಿ ರಚಿಸುವಷ್ಟು ಸಮಯವೂ ಇಲ್ಲ ಎಂದು ಟಿಕಾಯತ್‌ಹೇಳಿದರು.

ಮಾಧ್ಯಮ ವಿರುದ್ಧ ಆಕ್ರೋಶ:
ಮಾಧ್ಯಮಗಳು ಮೂರು ದಿನಗಳಿಂದ ರೈತರನ್ನು ಪ್ರಶ್ನಿಸುತ್ತಲೇ ಇವೆ.‘ನಮಗೆ ಹಲವು ಸಮಸ್ಯೆಗಳು ಮತ್ತು ಹಲವು ಬೇಡಿಕೆಗಳು ಇವೆ. ‍ಪ್ರತಿಭಟನೆ ವೇಳೆ ಜೀವ ತೆತ್ತ ರೈತರಿಗೆ ಸಂಬಂಧಿಸಿದ ವಿಚಾರಗಳಿವೆ’ ಎಂದು ಅವರು ಹೇಳಿದರು.

ಬೇಡಿಕೆ ಪುನರುಚ್ಚಾರ

ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಸರ್ಕಾರ ಘೋಷಿಸಿದ್ದರೂ ರೈತರು ಪ್ರತಿಭಟನೆ ನಿಲ್ಲಿಸಿಲ್ಲ. ಎಂಎಸ್‌ಪಿಗೆ ಕಾನೂನಿನ ಖಾತರಿ ಬೇಕು, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಬಂಧಿಸಬೇಕು, ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂದಕ್ಕೆ ಪಡೆಯಬೇಕು, ಪ್ರತಿಭಟನೆ ವೇಳೆ ಮೃತರಾದ ರೈತರಿಗಾಗಿ ಸ್ಮಾರಕ ನಿರ್ಮಿಸಬೇಕು, ವಿದ್ಯುತ್‌ ಸುಧಾರಣೆ ಮಸೂದೆಯನ್ನು ಕೈಬಿಡಬೇಕು ಮುಂತಾದ ಬೇಡಿಕೆಗಳನ್ನು ರೈತರು ಪುನರುಚ್ಚರಿಸಿದ್ದಾರೆ.

ಕ್ಷಮಾಪಣೆಯಿಂದ ರೈತರ ಉತ್ಪನ್ನಗಳಿಗೆ ಉತ್ತಮ ದರ ದೊರೆಯುವುದಿಲ್ಲ. ಉತ್ತಮ ದರ ದೊರೆಯಬೇಕಿದ್ದರೆ ಉತ್ತಮ ನೀತಿ ರೂಪಿಸಬೇಕು ಎಂದು ಟಿಕಾಯತ್‌ ಹೇಳಿದ್ದಾರೆ. ಎಂಎಸ್‌ಪಿಗೆ ಸಂಬಂಧಿಸಿ ಸಮಿತಿ ರಚಿಸಲಾಗಿದೆ ಎಂಬ ಹೇಳಿಕೆಯೂ ಸುಳ್ಳು ಎಂದರು.

ಹೋರಾಟದ ಹುರುಪು

ಮಹಾಪಂಚಾಯಿತಿಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದಲೂ ಜನರು ಬಂದಿದ್ದರು. ರೈತರ ಗುಂಪುಗಳು ಭಾನುವಾರ ರಾತ್ರಿಯಿಂದಲೇ ನಗರಕ್ಕೆ ಬರಲಾರಂಭಿಸಿದ್ದವು. ಪಂಚಾಯಿತಿ ಆರಂಭಕ್ಕೂ ಮೊದಲೇ ಮೈದಾನವು ಜನರಿಂದ ತುಂಬಿ ಹೋಗಿತ್ತು. ರೈತರು ಹೋರಾಟದ ಹುರುಪಿನಲ್ಲಿಯೇ ಇದ್ದರು ಮತ್ತು ತಮ್ಮೆಲ್ಲ ಸಮಸ್ಯೆ ಪರಿಹಾರವಾಗುವ ತನಕ ಹೋರಾಟ ಮುಂದುವರಿಸುವ ದೃಢ ನಿರ್ಧಾರವು ಅವರಲ್ಲಿ ಕಂಡಿತು.

‘ನಾನು ಪಿಲಿಭಿತ್‌ನಿಂದ ಬಂದಿದ್ದೇನೆ. ಈ ದೇಶದಲ್ಲಿ ರೈತರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗ. ನಮ್ಮ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಪ್ರತಿಭಟನೆ ಮುಂದುವರಿಸಲೇಬೇಕು’ ಎಂದು ಮಹಾಪಂಚಾಯಿತಿಯಲ್ಲಿ ಭಾಗವಹಿಸಲು ಬಂದಿದ್ದ ಕರ್ತಾರ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT