ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಹಾಗೂ ರಾಜ್ಯದ ಇಲಾಖೆಗಳ ನಡುವೆ ಸಮನ್ವಯ ಅಗತ್ಯ: ನರೇಂದ್ರ ಮೋದಿ

ನೆರೆ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ ಸೂಚನೆ
Last Updated 10 ಆಗಸ್ಟ್ 2020, 13:43 IST
ಅಕ್ಷರ ಗಾತ್ರ

ನವದೆಹಲಿ: ನೆರೆ ಮುನ್ಸೂಚನೆ ನೀಡುವ ಶಾಶ್ವತ ವ್ಯವಸ್ಥೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.

ನೆರೆಯಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳದಮುಖ್ಯಮಂತ್ರಿಗಳ ಜೊತೆ ಆನ್‌ಲೈನ್‌ ಮೂಲಕ ಮೋದಿ ಸಭೆ ನಡೆಸಿದರು. ಈ ವೇಳೆ, ಪ್ರಸ್ತುತ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಭಾರಿ ಮಳೆ ಮುನ್ಸೂಚನೆ ಹಾಗೂ ಅನಾಹುತದ ಎಚ್ಚರಿಕೆಯನ್ನು ನೀಡಬೇಕಾಗಿದೆ ಎಂದು ಅಧಿಕಾರಿಗಳಿಗೆ ಮೋದಿ ಸೂಚಿಸಿದರು ಎಂದು ಪ್ರಧಾನಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

‘ಸಿಡಿಲು, ಪ್ರವಾಹದಂಥ ಸಂದರ್ಭದಲ್ಲಿ ಒಂದು ಪ್ರದೇಶದ ಜನರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಬೇಕಾಗುವಂಥ ವ್ಯವಸ್ಥೆ ನಿರ್ಮಾಣಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕಾಗಿದೆ. ಕೋವಿಡ್‌–19 ಪಿಡುಗಿನ ಕಾರಣ, ರಕ್ಷಣಾ ಚಟುವಟಿಕೆಯ ಸಂದರ್ಭದಲ್ಲೂ ಎಲ್ಲರೂ ಮುಖಗವಸು, ಸ್ಯಾನಿಟೈಸರ್‌, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆಯೂ ರಾಜ್ಯಗಳು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

‘ಸಂತ್ರಸ್ತರಿಗೆ ನೀಡುವ ಪರಿಹಾರ ವಸ್ತುಗಳಲ್ಲಿ ಮುಖಗವಸು, ಸ್ಯಾನಿಟೈಸರ್‌ ಹಾಗೂ ಹ್ಯಾಂಡ್‌ವಾಶ್‌‌ಗಳೂ ಇರಬೇಕು. ಹಿರಿಯರಿಗೆ, ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ರೂಪಿಸಬೇಕು’ ಎಂದರು. ಕೊರೊನಾ ಪಿಡುಗು ಇಲ್ಲದೇ ಹೋಗಿದ್ದರೆ, ನೆರೆ ಸಂಕಷ್ಟಕ್ಕೆ ಈಡಾದ ಎಲ್ಲ ರಾಜ್ಯಗಳಿಗೂ ತಾನು ಖುದ್ದಾಗಿ ಭೇಟಿ ನೀಡುತ್ತಿದ್ದೆ ಎಂದು ಮೋದಿ ಸಭೆಯಲ್ಲಿ ಉಲ್ಲೇಖಿಸಿದರು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಮಾಹಿತಿ ನೀಡಿದರು.

ನೇಪಾಳದ ವಿರುದ್ಧ ಅಸಮಾಧಾನ: ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇಪಾಳದ ವಿರುದ್ಧ ಅಸಮಾಧಾನ ಹೊರಹಾಕಿದರು. ನೇಪಾಳದಲ್ಲಿ ಉಗಮವಾಗುವ ಕೆಲ ನದಿಗಳಿಗೆ ಅಣೆಕಟ್ಟಿನಿಂದ ಹೆಚ್ಚಿನ ನೀರು ಹರಿಸಿದ ಕಾರಣ ಬಿಹಾರದ ನೂರಾರು ಹಳ್ಳಿಗಳು ಪ್ರವಾಹದಿಂದ ಮುಳುಗಡೆಯಾಗಿವೆ.‘ಕಳೆದ ಕೆಲ ವರ್ಷದಿಂದ ನೇಪಾಳದ ಪೂರ್ಣ ಸಹಕಾರ ಬಿಹಾರದ ಅಧಿಕಾರಿಗಳಿಗೆ ದೊರೆಯುತ್ತಿಲ್ಲ. ತಕ್ಷಣದಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ನಿತೀಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT