ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್‌ನತ್ತ ಮೋದಿ: ಅಮೆರಿಕದೊಂದಿಗೆ ಸಂಬಂಧ ಗಟ್ಟಿಗೊಳಿಸಲು ಸದಾವಕಾಶ–ಪ್ರಧಾನಿ

Last Updated 22 ಸೆಪ್ಟೆಂಬರ್ 2021, 22:25 IST
ಅಕ್ಷರ ಗಾತ್ರ

ನವದೆಹಲಿ:ಭಾರತ-ಅಮೆರಿಕ ನಡುವಣ ಸಮಗ್ರ ಪಾಲುದಾರಿಕೆ ಬಲಪಡಿಸಲು ಮತ್ತು ಜಪಾನ್, ಆಸ್ಟ್ರೇಲಿಯಾದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ತಮ್ಮ ಅಮೆರಿಕ ಭೇಟಿ ಒಂದು ಸುಸಂದರ್ಭ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ಅಮೆರಿಕಕ್ಕೆ ಪ್ರಯಾಣಿಸುವ ಮುನ್ನ ಪ್ರಧಾನಿ ಅವರ ಹೇಳಿಕೆ ಬಿಡುಗಡೆಮಾಡಲಾಗಿದೆ. ಅವರು ಅಲ್ಲಿಂದ ವಾಪಸಾಗುವ ಮುನ್ನ ವಿಶ್ವಸಂಸ್ಥೆಯ ಮಹಾ ಅಧಿವೇಶದಲ್ಲಿ ಭಾಷಣ ಮಾಡಲಿದ್ದಾರೆ. ಕೋವಿಡ್ ಸಾಂಕ್ರಾಮಿಕ, ಭಯೋತ್ಪಾದನೆ ಹಾಗೂ ಹವಾಮಾನ ವೈಪರೀತ್ಯದಂತಹ ವಿಷಯಗಳು ಒಡ್ಡಿರುವ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ತಾವು ಅಮೆರಿಕಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ವಿಸ್ತೃತ ಹಂತದ ಮಾತುಕತೆಯಲ್ಲಿ ತೊಡಗುವುದಾಗಿ ಹೇಳಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನೂ ಭೇಟಿ ಮಾಡಲಿದ್ದು, ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರದ ಬಗ್ಗೆ ಚರ್ಚಿಸಲಿದ್ದಾರೆ.

ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರೊಂದಿಗೆ ಕ್ವಾಡ್ ನಾಯಕರ ಮೊದಲ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಮೋದಿ ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಕ್ವಾಡ್ ನಾಯಕರ ವರ್ಚುವಲ್ ಶೃಂಗಸಭೆಯ ಫಲಿತಾಂಶಗಳ ಬಗ್ಗೆ ಚರ್ಚಿಸಲು ಹಾಗೂ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಭವಿಷ್ಯದ ಆದ್ಯತೆಗಳನ್ನು ಗುರುತಿಸಲು ಈ ಶೃಂಗಸಭೆ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಹಮ್ಮೆಯೆನಿಸುತ್ತಿದೆ ಎಂದು ಅಮೆರಿಕದ ಪ್ರಭಾವಿ ಸೆನೆಟ್ ಸದಸ್ಯ ಅರ್ಲ್ ಬುಡ್ಡಿ ಕಾರ್ಟರ್ ಅವರು ಸದನದಲ್ಲಿ ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ನೆಲೆಯಲ್ಲಿ ಆಳದಲ್ಲಿ ಬೇರೂರಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

‘ಹಲವು ವರ್ಷಗಳಿಂದ ಎರಡೂ ದೇಶಗಳು ತಮ್ಮ ವ್ಯಾಪಾರ, ಸಹಯೋಗವನ್ನು ಹೆಚ್ಚಿಸಿವೆ. ಇದು ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ’ ಎಂದು ಅವರು ಹೇಳಿದರು. 2019ರಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ, ಸರಕು ಮತ್ತು ಸೇವೆಗಳ ಮೊತ್ತವು ₹11.16 ಲಕ್ಷ ಕೋಟಿಗೆ ತಲುಪಿದೆ’ ಎಂದಿದ್ದಾರೆ.

ಏನೇನು ಕಾರ್ಯಕ್ರಮ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ನಡುವೆ ಮೊದಲ ಮುಖತಃ ಸಭೆ ಶುಕ್ರವಾರ (ಸೆ. 24) ನಡೆಯಲಿದೆ. ‘ಅಫ್ಗನ್ ಬಿಕ್ಕಟ್ಟು ಮತ್ತು ಅದರ ಪರಿಣಾಮಗಳು, ಚೀನಾದ ಪ್ರತಿರೋಧ, ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಯುವ ಮಾರ್ಗಗಳು ಮತ್ತು ಭಾರತ-ಅಮೆರಿಕ ನಡುವಿನ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ವಿಚಾರಗಳು ಸಭೆಯ ಕೇಂದ್ರ ಬಿಂದುಗಳಾಗಿವೆ.

ಈ ಬಗ್ಗೆ ಮಾಧ್ಯಮ ಸಭೆಯಲ್ಲಿ ಮಂಗಳವಾರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಮಾತನಾಡಿದ್ದರು.

ಬೈಡನ್ ಆಯೋಜಿಸಿರುವ ಕೋವಿಡ್–19 ಜಾಗತಿಕ ಶೃಂಗಸಭೆಯಲ್ಲಿಯೂ ಪ್ರಧಾನಿ ಭಾಗಿಯಾಗಲಿದ್ದಾರೆ. ವಾಷಿಂಗ್ಟನ್‌ನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಮೋದಿ ಅವರು ಶುಕ್ರವಾರ ಸಂಜೆ ನ್ಯೂಯಾರ್ಕ್‌ಗೆ ಪ್ರಯಾಣಿಸಲಿದ್ದು, ಮರುದಿನ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅಮೆರಿಕದ ಪ್ರಮುಖ ಕಂಪನಿಗಳ ಹಲವಾರು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವೂ ಇದೆ.

ರಾಜತಾಂತ್ರಿಕತೆಯ ಹೊಸ ಯುಗ:ಬೈಡನ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ತಮ್ಮ ಮೊದಲ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು,ಕೋವಿಡ್-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ಜಾಗತಿಕಸಮಸ್ಯೆಗಳನ್ನು ಪರಿಹರಿಸಲು ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಿದರು.

ಚೀನಾದೊಂದಿಗೆ ಅಮೆರಿಕವು ಹೊಸ ಶೀತಲ ಸಮರವನ್ನು ಬಯಸುತ್ತಿಲ್ಲ ಎಂದು ಅವರು ಹೇಳಿದರು.

ಅಫ್ಗನ್‌ನಿಂದ ಸೇನಾ ವಾಪಸಾತಿ ಹಾಗೂ ಫ್ರಾನ್ಸ್‌ ಜೊತೆ ಹದಗೆಟ್ಟಿರುವ ರಾಜತಾಂತ್ರಿಕ ಸಂಬಂಧ ಕುರಿತಾದ ಟೀಕೆಗಳಿಗೆ ಅವರು ಉತ್ತರಿಸಲು ಹೋಗಲಿಲ್ಲ.

‘ನಾವು ರಾಜತಾಂತ್ರಿಕತೆಯ ಹೊಸ ಯುಗವನ್ನು ತೆರೆಯುತ್ತಿದ್ದೇವೆ. ಅಫ್ಗಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ಅಂತ್ಯದೊಂದಿಗೆ ಒಂದು ಮಹತ್ವದ ಘಟ್ಟವನ್ನು ತಲುಪಿದ್ದೇವೆ’ ಎಂದರು.

‘ಇಂದು ನಮ್ಮ ಹೆಚ್ಚಿನ ಸಮಸ್ಯೆಗಳನ್ನು ಶಸ್ತ್ರಾಸ್ತ್ರ ಬಲದಿಂದ ಪರಿಹರಿಸಲಾಗುವುದಿಲ್ಲ. ಕೋವಿಡ್ ಅಥವಾ ಅದರ ರೂಪಾಂತರಗಳಿಂದ ಬಾಂಬ್‌ಗಳು ಮತ್ತು ಗುಂಡುಗಳು ರಕ್ಷಣೆ ಕೊಡಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT