ಭಾನುವಾರ, ಸೆಪ್ಟೆಂಬರ್ 26, 2021
21 °C

ಪಿಎಂ ಕಿಸಾನ್ ಯೋಜನೆ – ರೈತರ ಖಾತೆಗಳಿಗೆ ₹19,500 ಕೋಟಿ ವರ್ಗಾವಣೆ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ (ಪಿಎಂ ಕಿಸಾನ್) 9ನೇ ಕಂತಿನ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು.

ಬಳಿಕ ಹಲವು ರೈತರ ಜತೆ ಸಂವಾದ ನಡೆಸಿದ ಪ್ರಧಾನಿಯವರು, ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಕಿಸಾನ್‌ ಸಮ್ಮಾನ್‌ ಯೋಜನೆ 9ನೇ ಕಂತಿನಲ್ಲಿ ಸುಮಾರು 10 ಕೋಟಿ ರೈತರ ಖಾತೆಗಳಿಗೆ ಸುಮಾರು ₹19,500 ಕೋಟಿ ವರ್ಗಾವಣೆಯಾಗಿದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು.

₹ 1 ಲಕ್ಷ ಕೋಟಿಯ ಕೃಷಿ ಮೂಲಸೌಕರ್ಯ ನಿಧಿಯಿಂದ ಸಹಸ್ರಾರು ರೈತರಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು...

* ಈ ವರ್ಷ ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಇದು ಮಹತ್ವದ ಮೈಲಿಗಲ್ಲಾಗಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಮಾತ್ರವಲ್ಲದೆ ಹೊಸ ನಿರ್ಣಯಗಳು ಮತ್ತು ಗುರಿಗಳಿಗೆ ತೆರೆದುಕೊಳ್ಳುವ ಸಂದರ್ಭವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಯಾವ ಸ್ಥಾನದಲ್ಲಿರಬೇಕು ಎಂಬ ಬಗ್ಗೆ ಈ ಸಂದರ್ಭದಲ್ಲಿ ನಾವು ನಿರ್ಧಾರ ಕೈಗೊಳ್ಳಬೇಕು.

* ಸ್ವಾತಂತ್ರ್ಯ ದೊರೆತು 100 ವರ್ಷಗಳಾಗುವ ಸಂದರ್ಭದಲ್ಲಿ, 2047ರಲ್ಲಿ ಭಾರತವು ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ನಿರ್ಧರಿಸಬೇಕು. ಇದನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ, ಗ್ರಾಮಗಳು ಮತ್ತು ರೈತರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೃಷಿಗೆ ಅಂತಹ ದಿಕ್ಕನ್ನು ನೀಡುವ ಸಮಯ ಇದಾಗಿದೆ. ಇದರಿಂದ ಹೊಸ ಸವಾಲುಗಳನ್ನು ಎದುರಿಸಲು ಮತ್ತು ಹೊಸ ಅವಕಾಶಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ.

* ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ನಮ್ಮ ರೈತರು ಒಗ್ಗಟ್ಟು ಪ್ರದರ್ಶಿಸಿರುವುದನ್ನು ನಾವು ನೋಡಿದ್ದೇವೆ. ರೈತರು ಕೃಷಿ ಉತ್ಪನ್ನಗಳನ್ನು ದಾಖಲೆಯ ಪ್ರಮಾಣದಲ್ಲಿ ಬೆಳೆದಿದ್ದಾರೆ. ಸರ್ಕಾರವೂ ರೈತರ ಕಷ್ಟಗಳನ್ನು ಆದಷ್ಟು ಕಡಿಮೆ ಮಾಡಲು ಯತ್ನಿಸಿದೆ. ಬಿತ್ತನೆ ಬೀಜಗಳು, ರಸಗೊಬ್ಬರ ಒದಗಿಸುವ ಮೂಲಕ ಹಾಗೂ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಮೂಲಕ ಅವರಿಗೆ ನೆರವಾಗಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ.

* ಸರ್ಕಾರವು ಕನಿಷ್ಠ ಬೆಂಬಲ ಬೆಲೆಯೊಂದಿಗೆ ರೈತರಿಂದ ಅತಿಹೆಚ್ಚು ಕೃಷಿ ಉತ್ಪನ್ನ ಖರೀದಿಸಿದೆ. ಭತ್ತ ಬೆಳೆಯುವ ರೈತರ ಬ್ಯಾಂಕ್ ಖಾತೆಗಳಿಗೆ ₹1.70 ಲಕ್ಷ ಕೋಟಿ ನೇರ ವರ್ಗಾವಣೆಯಾಗಿದೆ. ಗೋಧಿ ಬೆಳೆಯುವ ರೈತರ ಖಾತೆಗಳಿಗೆ ₹85 ಸಾವಿರ ಕೋಟಿ ನೇರ ವರ್ಗಾವಣೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು