ಸೋಮವಾರ, ಮೇ 17, 2021
21 °C

ನರೇಂದ್ರ ಮೋದಿ–ಮಮತಾ ಬ್ಯಾನರ್ಜಿ ಏಟು ಎದುರೇಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಮತಾ ಕಾರಣದಿಂದ ರೈತರಿಗೆ ಅನ್ಯಾಯ: ಪ್ರಧಾನಿ ಆರೋಪ
ನವದೆಹಲಿ/ಕೋಲ್ಕತ್ತ
: ಪಿಎಂ-ಕಿಸಾನ್ ಯೋಜನೆ ಅಡಿ ಕೇಂದ್ರ ಸರ್ಕಾರವು ರೈತರಿಗೆ ನೀಡುತ್ತಿರುವ ₹ 6,000 ಮೊತ್ತವು ಪಶ್ಚಿಮ ಬಂಗಾಳದ ರೈತರಿಗೆ ತಲುಪದಂತೆ  ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡೆದಿದ್ದಾರೆ. ಮಮತಾ ಅವರ ರಾಜಕೀಯದ ಕಾರಣ ರೈತರು ಈ ಯೋಜನೆಯ ಅನುಕೂಲದಿಂದ ವಂಚಿತರಾಗಿದ್ದಾರೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಪಿಎಂ-ಕಿಸಾನ್ ಯೋಜನೆಯ ಭಾಗವಾಗಿ ₹ 18,000 ಕೋಟಿಯನ್ನು ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಮೋದಿ ಅವರು ಈ ಆರೋಪ ಮಾಡಿದ್ದಾರೆ.

‘ಈ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ 23 ಲಕ್ಷ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಲು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯದ 70 ಲಕ್ಷ ರೈತರಿಗೆ ನಷ್ಟವಾಗಿದೆ’ ಎಂದು ಮೋದಿ ಆರೋಪಿಸಿದ್ದಾರೆ.

‘ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ಪಿಎಂ-ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂದು ಯಾವೊಬ್ಬ ರೈತನೂ ಪ್ರತಿಭಟನೆ ನಡೆಸುತ್ತಿಲ್ಲ. ಇದು ಆಶ್ಚರ್ಯಕರ ವಿಚಾರ’ ಎಂದು ಮೋದಿ ಹೇಳಿದ್ದಾರೆ.

‘30 ವರ್ಷಗಳಿಂದ ಒಂದೇ ಸಿದ್ಧಾಂತದ ಪಕ್ಷಗಳು ಪಶ್ಚಿಮ ಬಂಗಾಳವನ್ನು ಆಳ್ವಿಕೆ ಮಾಡುತ್ತಿವೆ. ಇಷ್ಟು ಅವಧಿಯಲ್ಲಿ ಅವು ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಧ್ವಂಸ ಮಾಡಿವೆ. ರೈತರಿಗೆ ಲಾಭವಾಗುವ ಪಿಎಂ-ಕಿಸಾನ್ ಯೋಜನೆಯ ಬಗ್ಗೆ ಒಂದು ಮಾತನ್ನೂ ಆಡದ ಈ ಪಕ್ಷಗಳು, ರೈತರ ಹೆಸರಿನಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ದೆಹಲಿಯ ಜನರಿಗೆ ತೊಂದರೆ ಕೊಡುತ್ತಿವೆ. ಇದರಿಂದ ದೆಶದ ಆರ್ಥಿಕತೆಗೂ ಧಕ್ಕೆಯಾಗಿದೆ’ ಎಂದು ಪ್ರಧಾನಿ ಆರೋಪಿಸಿದ್ದಾರೆ.

‘15 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಅವರು ಎಡಪಕ್ಷಗಳ ವಿರುದ್ಧ ಹೋರಾಡುತ್ತಿದ್ದರು. 15 ವರ್ಷಗಳ ಹಿಂದೆ ಅವರು ಆಡಿದ್ದ ಮಾತುಗಳನ್ನು ಕೇಳಿಸಿಕೊಳ್ಳಿ. ಈಗ ಅವರು ಪಶ್ಚಿಮ ಬಂಗಾಳವನ್ನು ಎಷ್ಟು ಹಾಳು ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಒಂದು ಕಾಲದಲ್ಲಿ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಪ್ರಬಲವಾಗಿದ್ದವು. ಈಗ ಕೇರಳದಲ್ಲಿ ಸರ್ಕಾರ ನಡೆಸುತ್ತಿವೆ. ಎಪಿಎಂಸಿಗಳು ಇಲ್ಲದೇ ಇರುವುದರ ಬಗ್ಗೆ ಈ ಪಕ್ಷಗಳು ಈಗ ಮಾತನಾಡುತ್ತಿವೆ. ಆದರೆ ಕೇರಳದಲ್ಲಿ ಬಹಳ ವರ್ಷಗಳಿಂದ ಎಪಿಎಂಸಿ ಇಲ್ಲ’ ಎಂದು ಮೋದಿ ಲೇವಡಿ ಮಾಡಿದ್ದಾರೆ.

ಮೋದಿಯದ್ದು ಅರ್ಧಸತ್ಯ: ಮಮತಾ
‘ಪ್ರಧಾನಿ ನರೇಂದ್ರ ಮೋದಿ ಅವರು ಅರ್ಧಸತ್ಯಗಳನ್ನು ಹೇಳುವ ಮೂಲಕ ಜನರ ಹಾದಿಯನ್ನು ತಪ್ಪಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿರುಗೇಟು ನೀಡಿದ್ದಾರೆ.

‘ಪಿಎಂ-ಕಿಸಾನ್ ಯೋಜನೆಯ ಹಣ ರೈತರಿಗೆ ನೀಡಲು ಬಿಡುತ್ತಿಲ್ಲ ಎಂದು ಮೋದಿ ಅವರು ಹೇಳಿದ್ದಾರೆ. ಈ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆಯೇ ಮಾಡಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಇನ್ನೊಂದು ಪತ್ರ ಬರೆಯಲಾಗಿತ್ತು. ಈ ಪತ್ರಗಳಿಗೆ ಈವರೆಗೆ ಉತ್ತರ ಬಂದಿಲ್ಲ. ಆದರೆ ಈ ಯೋಜನೆಗೆ ನಾವು ಸಹಕಾರ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರು ಇಂದು ಆರೋಪಿಸುತ್ತಿದ್ದಾರೆ. ಇಂತಹ ಅರ್ಧ ಸತ್ಯಗಳನ್ನು ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರವು ನಮ್ಮ ರಾಜ್ಯಕ್ಕೆ ನೀಡಬೇಕಿದ್ದ ಹಲವು ಅನುದಾನಗಳು ಮತ್ತು ಬಾಕಿಗಳನ್ನು ನೀಡಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯದ ಪಾಲಿನ ಪರಿಹಾರದಲ್ಲಿ ಇನ್ನೂ ₹ 8,000 ಕೋಟಿಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ’ ಎಂದು ಮಮತಾ ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಪಶ್ಚಿಮ ಬಂಗಾಳ ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ. ಆದರೆ ಈ ಪಿಎಂ-ಕಿಸಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರೆ, ಏನು ಹೇಳುವುದು. ಮೋದಿ ಅವರ ಆರೋಪದಲ್ಲಿ ಹುರುಳಿಲ್ಲ, ಅಷ್ಟೆ’ ಎಂದು ಮಮತಾ ಹೇಳಿದ್ದಾರೆ.

**

ಮಮತಾ ಬ್ಯಾನರ್ಜಿ ಅವರ ಸಿದ್ಧಾಂತಗಳನ್ನು ರಾಜ್ಯದ, ದೇಶದ ಜನರು ನೋಡಿದ್ದಾರೆ. ಅವರು ಎಷ್ಟು ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಿದೆ.
-ನರೇಂದ್ರ ಮೋದಿ, ಪ್ರಧಾನಿ

*

ನನ್ನ ಸಿದ್ಧಾಂತಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದೀರಿ. ಪಶ್ಚಿಮ ಬಂಗಾಳದ ಜನರ ಸೇವೆಗೆ ಬದ್ಧವಾಗಿರುವುದು ನನ್ನ ಸಿದ್ಧಾಂತವಾಗಿದೆ. ನಾನು ಆ ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು