ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ: ಸಿಬ್ಬಂದಿ ವೃದ್ಧಿಗೆ ಕ್ರಮ

ನೀಟ್‌–ಪಿಜಿ ಮುಂದೂಡಿಕೆ * ತರಬೇತಿ ನಿರತ ವೈದ್ಯರು, ಪದವಿ ಪೂರೈಸಿದ ಶುಶ್ರೂಷಕಿಯರ ಸೇವೆ ಬಳಕೆ
Last Updated 3 ಮೇ 2021, 12:12 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಿಯೋಜಿಸಲಾಗುವ ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ವಿವಿಧ ಸಕಾರಾತ್ಮಕ ತೀರ್ಮಾನಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮತಿದ್ದಾರೆ.

ಅಗತ್ಯ ವಿದ್ಯಾರ್ಹತೆಯ ವೈದ್ಯರು ಕೋವಿಡ್‌ ಚಿಕಿತ್ಸೆ ಸೇವೆಗೆ ಲಭ್ಯವಿರುವಂತೆ ಹಾಗೂ ತರಬೇತಿ ನಿರತ ವೈದ್ಯರನ್ನೂ ಸೇವೆಗೆ ನಿಯೋಜಿಸಲು ಅನುವಾಗುವಂತೆ ಮಾಡಲು ನೀಟ್‌–ಪಿಜಿ ಪರೀಕ್ಷೆಯನ್ನು ಕನಿಷ್ಠ ನಾಲ್ಕು ತಿಂಗಳು ಮುಂದೂಡುವುದೂ ಇದರಲ್ಲಿ ಸೇರಿದೆ.

ಸೋಮವಾರ ಈ ಕುರಿತ ಹೇಳಿಕೆ ನೀಡಿರುವ ಪ್ರಧಾನಮಂತ್ರಿಗಳ ಕಾರ್ಯಾಲಯ, ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವೆಯನ್ನು ಟೆಲಿ ಸಮಾಲೋಚನೆ ಮತ್ತು ಗಂಭೀರವಲ್ಲದ ಕೋವಿಡ್‌ ಪ್ರಕರಣಗಳ ನಿರ್ವಹಣೆಗೆ ಬಳಸಿಕೊಳ್ಳಬಹುದು. ಈ ಪ್ರಕ್ರಿಯೆ ಹಿರಿಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ತಿಳಿಸಿದೆ.

ತರಬೇತಿ ನಿರತ ವೈದ್ಯರು ವಿಭಾಗದ ಹಿರಿಯರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಕ್ರಮಗಳು ಒಟ್ಟಾರೆಯಾಗಿ ಈಗಾಗಲೇ ಕೋವಿಡ್‌ ನಿರ್ವಹಣೆ ಸೇವೆಯಲ್ಲಿ ನಿರತರಾಗಿರುವ ವೈದ್ಯರ ಮೇಲಿನ ಒತ್ತಡವನ್ನು ಕುಗ್ಗಿಸಲಿದೆ ಎಂದು ಹೇಳಿಕೆ ಪ್ರತಿಪಾದಿಸಿದೆ. ಹೇಳಿಕೆಯ ಇತರೆ ಅಂಶಗಳು–

–ಬಿ.ಎಸ್‌ಸಿ., ಅಥವಾ ಜಿಎನ್‌ಎಂ ವಿದ್ಯಾರ್ಹತೆಯ ಶುಶ್ರೂಷಕಿಯರನ್ನು ಪೂರ್ಣಾವಧಿಯ ಕೋವಿಡ್‌ ನರ್ಸಿಂಗ್ ಸೇವೆಗೆ ಬಳಸಿಕೊಳ್ಳಬಹುದು. ಇವರು ವೈದ್ಯರು, ಹಿರಿಯ ದಾದಿಯರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕು.

–ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯಕೀಯ ವಿದ್ಯಾರ್ಥಿಗಳು, ವೃತ್ತಿಪರರು ಲಸಿಕೆ ನೀಡಲು ಕ್ರಮವಹಿಸಬೇಕು.

–ಕನಿಷ್ಠ 100 ದಿನ ಸೇವೆ ಸಲ್ಲಿಸಲು ಒಪ್ಪುವ ಮತ್ತು ಆ ಅವಧಿಯನ್ನು ಪೂರ್ಣಮಾಡುವ ಇಂತಹ ಸಿಬ್ಬಂದಿಗೆ ಪ್ರಧಾನಮಂತ್ರಿಗಳ ಕೋವಿಡ್ ರಾಷ್ಟ್ರೀಯ ಸೇವಾ ಪುರಸ್ಕಾರ ನೀಡಿ ಕೇಂದ್ರ ಸರ್ಕಾರ ಗೌರವಿಸಲಿದೆ.

–ಹೀಗೆ ನಿಯೋಜಿತರಾಗುವ ಸಿಬ್ಬಂದಿಗೆ ಕೋವಿಡ್‌ ವಿರುದ್ಧ ಸೇವೆಯಲ್ಲಿರುವ ಸಿಬ್ಬಂದಿಗೆ ಜಾರಿಗೊಳಿಸಿರುವ ವಿಮಾ ಯೋಜನೆಯ ಭದ್ರತೆಯೂ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT