ಸೋಮವಾರ, ಸೆಪ್ಟೆಂಬರ್ 27, 2021
21 °C

ನಕಲಿ ಆರ್‌ಟಿ-ಪಿಸಿಆರ್‌ ಪ್ರಮಾಣಪತ್ರ ದಂಧೆ ನಡೆಸುತ್ತಿದ್ದ 12 ಜನರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪುರಿ: 12 ನೇ ಶತಮಾನದ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಜನರಿಗೆ ವಿತರಿಸಲೆಂದು ನಕಲಿ ಆರ್‌ಟಿ-ಪಿಸಿಆರ್ ಪ್ರಮಾಣಪತ್ರಗಳನ್ನು ತಯಾರಿಸುತ್ತಿದ್ದ ಆರೋಪದ ಮೇಲೆ ಪುರಿ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಮತ್ತು 12 ಜನರನ್ನು ಬಂಧಿಸಿದ್ದಾರೆ.

ಈ ಪೈಕಿ ಎರಡು ಪ್ರಕರಣಗಳು ಸಿಂಗದ್ವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೆ, ಇನ್ನೊಂದು ಪ್ರಕರಣ ಹದಿನೈದು ದಿನಗಳ ಅವಧಿಯಲ್ಲಿ ಯಾತ್ರಾಸ್ಥಳದ ಕುಂಭಾರಪದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸಿಂಗದ್ವಾರ ಪೊಲೀಸ್ ಠಾಣೆಯು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಪುರಿ ಪಟ್ಟಣಕ್ಕೆ ಸೇರಿದವರು. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೆಯೇ, ಕುಂಭಾರಪದ ಠಾಣೆ ಪೊಲೀಸರು ನಕಲಿ ಆರ್‌ಟಿ-ಪಿಸಿಆರ್ ಪ್ರಮಾಣಪತ್ರವನ್ನು ಬಳಸಿದ ಒಬ್ಬ ಭಕ್ತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ಸಿಂಗದ್ವಾರ ಠಾಣೆ ಪೊಲೀಸರು ನಕಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಬಳಸಿದ ಭಕ್ತ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದೆ. ಈ ಪೈಕಿ ನಾಲ್ವರು ನಕಲಿ ಪ್ರಮಾಣಪತ್ರ ಸೃಷ್ಟಿಸುತ್ತಿದ್ದ ಗ್ಯಾಂಗ್‌ನ ಪ್ರಮುಖ ಆರೋಪಿಗಳು. ನಾಲ್ವರೂ ಪುರಿಗೆ ಸೇರಿದವರು ಎಂದು ಅವರು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಪೊಲೀಸರು, ಜಗನ್ನಾಥ ದೇವರ ದರ್ಶನಕ್ಕೆ ಬರುವಾಗ ಜನರು ಇಂತಹ ಗ್ಯಾಂಗ್‌ಗಳಿಂದ ಸಹಾಯ ಪಡೆಯುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕೋವಿಡ್-19 ಲಸಿಕೆ ಪಡೆದಿರಬೇಕು ಅಥವಾ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ 96 ಗಂಟೆಗಳ ಒಳಗಿನ ಕೋವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು (ಆರ್‌ಟಿ-ಪಿಸಿಆರ್) ಸಲ್ಲಿಸುವುದು ಕಡ್ಡಾಯವಾಗಿದೆ.

ಕೆಲವು ಭಕ್ತರು ನಕಲಿ ಆರ್‌ಟಿ-ಪಿಸಿಆರ್ ಪ್ರಮಾಣಪತ್ರವನ್ನು ತೋರಿಸಿ ದೇವಸ್ಥಾನವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ಪಡೆದ ನಂತರ ಈ ಬಗ್ಗೆ ವಿಚಾರಣೆ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು