ಶನಿವಾರ, ಆಗಸ್ಟ್ 13, 2022
26 °C

ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ; 'ಮಹಾ' ಪೊಲೀಸರಿಂದ ಮುನ್ನೆಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾ ಶಾಸಕ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗರ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದ ಆಕ್ರೋಶಗೊಂಡಿರುವ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಂಧೆ ಬೆಂಬಲಿಗರ ಫ್ಲೆಕ್ಸ್‌ ಬೋರ್ಡ್‌ಗಳ ಮೇಲೆ ಸೇನಾ ಕಾರ್ಯಕರ್ತರು ದಾಳಿ ನಡೆಸಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಎಲ್ಲ ಜಿಲ್ಲೆಗಳ ಉನ್ನತಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶಿವಸೇನಾದ ಕನಿಷ್ಠ 38 ಶಾಸಕರು ಮತ್ತು 10 ಪಕ್ಷೇತರರು ಏಕನಾಥ ಶಿಂಧೆ ನೇತೃತ್ವದಲ್ಲಿ ಅಸ್ಸಾಂನ ಗುವಾಹಟಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಇದರಿಂದಾಗಿ ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮೈತ್ರಿಕೂಟದ 'ಮಹಾ ವಿಕಾಸ ಆಘಾಡಿ' ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.

ಶಿವಸೇನಾ ಕಾರ್ಯಕರ್ತರು ಮುಂಬೈನಲ್ಲಿ, ಕುರ್ಲಾ ಶಾಸಕ ಮಂಗೇಶ್ ಕುಡಾಲ್ಕರ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಕೊಲ್ಹಾಪುರದಲ್ಲಿ ಭಾರಿ ಸಂಖ್ಯೆಯಲ್ಲಿ ರಸ್ತೆಗಿಳಿದು, ಬಂಡಾಯ ಶಾಸಕರ ವಿರುದ್ಧ ಪ್ರತಿಭಟಿಸಿದ್ದಾರೆ. ನಾಸಿಕ್‌ನ ಅಂಬೇಡ್ಕರ್‌ ನಗರದಲ್ಲೂ ಪ್ರತಿಭಟನೆ ನಡೆದಿವೆ.

ಈ ಬೆಳವಣಿಗೆಗಳನ್ನು ಗಮನದಲ್ಲಿರಿಸಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ 'ವರ್ಷಾ', ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಸ್ವಂತ ನಿವಾಸ 'ಮಾತೋಶ್ರೀ', ದಾದರ್‌ನಲ್ಲಿರುವ ಶಿವಸೇನಾದ ಪ್ರಧಾನ ಕಚೇರಿ 'ಶಿವ ಸೇನಾ ಭವನ', ಶಿಂಧೆ ಬಣದಲ್ಲಿರುವ ಬಂಡಾಯ ಶಾಸಕರ ನಿವಾಸ ಹಾಗೂ ಕಚೇರಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವನ್ನೂ ಓದಿ


   

   ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

   ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

   ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

   ಈ ವಿಭಾಗದಿಂದ ಇನ್ನಷ್ಟು