ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚೇರಿಯಲ್ಲಿ 14ರ ವರೆಗೆ ಲಾಕ್‌ಡೌನ್‌ ವಿಸ್ತರಣೆ; ನಿಯಮಗಳಲ್ಲಿ ಸಡಿಲಿಕೆ

Last Updated 8 ಜೂನ್ 2021, 7:00 IST
ಅಕ್ಷರ ಗಾತ್ರ

ಪುದುಚೇರಿ: ಪುದುಚೇರಿಯಲ್ಲಿ ಕೊರೊನಾ ಪ್ರಸರಣ ನಿಯಂತ್ರಿಸಲು ಹೇರಲಾಗಿರುವ ಲಾಕ್‌ಡೌನ್‌ ಅನ್ನು ಜೂನ್‌ 14ವರೆಗೆ ಅಲ್ಲಿನ ಸರ್ಕಾರವು ವಿಸ್ತರಿಸಿದೆ. ಇದರೊಂದಿಗೆ ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ.

ಈ ಸಂಬಂಧ ಪುದುಚೇರಿಯ ರಾಜ್ಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ (ಪರಿಹಾರ ಮತ್ತು ಪುನರ್ವಸತಿ) ಮತ್ತು ಸದಸ್ಯರು ಸೋಮವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.

ಪುದುಚೇರಿಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹೊಸ ನಿಯಮಗಳ ಪ್ರಕಾರ, ಮದ್ಯದ ಅಂಗಡಿಗಳು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ತೆರೆಯಬಹುದಾಗಿದೆ. ಈ ವೇಳೆ ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅ‌ಲ್ಲದೆ ಮದ್ಯದ ಅಂಗಡಿಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಹೋಂ ಡೆಲಿವರಿ ಸೇವೆಗೂ ಅವಕಾಶ ಕಲ್ಪಿಸಲಾಗಿದೆ.

ಸರಕು ಸಾಗಣೆ ವಾಹನ, ಬಸ್‌, ಆಟೋ, ಟ್ಯಾಕ್ಸಿಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ವಾಹನಗಳು ಸಂಜೆ 5ರವರೆಗೆ ಕಾರ್ಯನಿರ್ವಹಿಸಬಹುದು. ಉದ್ಯಾನ, ಮನೋರಂಜನಾ ಕೇಂದ್ರಗಳು, ಚಿತ್ರಮಂದಿರಗಳು ಮುಚ್ಚಿರಲಿವೆ. ಆದರೆ ವಾಯು ವಿಹಾರಿಗಳು ಬೆಳಿಗ್ಗೆ 5ರಿಂದ 6ರ ತನಕ ಬೀಚ್‌ಗಳಲ್ಲಿ ಓಡಾಡಬಹುದಾಗಿದೆ. ಈ ವೇಳೆ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಸ್ಥಳಗಳು ಸಂಜೆ 5ರ ತನಕ ತೆರದಿರಲು ಅನುಮತಿ ನೀಡಲಾಗಿದೆ. ಮದುವೆ ಸಮಾರಂಭಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಕೇವಲ 25 ಜನರು ಮಾತ್ರ ಸೇರಬಹುದಾಗಿದೆ. ಅಂತ್ಯಕ್ರಿಯೆ ಮತ್ತು ಇತರೆ ಆಚರಣೆಗಳಲ್ಲಿ ಕೇವಲ 20 ಮಂದಿ ಭಾಗವಹಿಸಲು ಅನುಮತಿ ನೀಡಲಾಗಿದೆ.

‘ಬೆಳಿಗ್ಗೆ 5ರಿಂದ ಸಂಜೆ 5 ಗಂಟೆಯವರೆಗೆ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕೆ ಅನುವು ಮಾಡಲಾಗಿದೆ. ವಾಣಿಜ್ಯ ಮಳಿಗೆಗಳು ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಮಾತ್ರ ತೆರೆದಿರಬಹುದು. ಈ ವೇಳೆ ಎ.ಸಿಯನ್ನು ಬಳಸುವಂತಿಲ್ಲ. ಅಗತ್ಯ ಸೇವೆಗಳಾದ ಹಾಲು ಸರಬರಾಜು ಮತ್ತು ವೈದ್ಯಕೀಯ ಸೇವೆಗಳ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT