ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನ ಸೃಷ್ಟಿಸಿದ ‘ಮುಂದಿನ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ’ ಭಿತ್ತಿಪತ್ರ

ತಮಿಳುನಾಡು ರಾಜಕಾರಣ | ಎಐಎಡಿಎಂಕೆ ಪಕ್ಷದಲ್ಲಿ ಪರ– ವಿರೋಧ ಚರ್ಚೆ
Last Updated 15 ಆಗಸ್ಟ್ 2020, 11:53 IST
ಅಕ್ಷರ ಗಾತ್ರ

ಥೇಣಿ (ತಮಿಳುನಾಡು): ಥೇಣಿ ಜಿಲ್ಲೆಯ ಕೆಲವು ಊರುಗಳಲ್ಲಿ ‘ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಿಸಲು ಜೆ.ಜಯಲಲಿತಾ ಅವರ ಆಶೀರ್ವಾದ ಹೊಂದಿರುವ ಏಕೈಕ ಅಭ್ಯರ್ಥಿ ಎಂದರೆ ಒ. ಪನ್ನೀರ್‌ಸೆಲ್ವಂ’ ಎಂಬ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದು, ಚರ್ಚೆಗೆ ಕಾರಣವಾಗಿವೆ.

ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ, ಈ ಭಿತ್ತಿಪತ್ರಗಳು ಆಡಳಿತಾರೂಢ ಎಐಎಡಿಎಂಕೆ ಪಾಳೆಯದಲ್ಲಿ ಕಂಪನ ಸೃಷ್ಟಿಸಿವೆ.

ಉಪಮುಖ್ಯಮಂತ್ರಿಯಾಗಿರುವ ಪನ್ನೀರ್‌ಸೆಲ್ವಂ ಅವರ ಊರು ಥೇಣಿ ಜಿಲ್ಲೆಯ ಪೆರಿಯಾಕುಳಂ. ಈ ಊರಿನಲ್ಲಿ ಅಲ್ಲದೇ, ಜಿಲ್ಲೆಯ ಬೋದಿನಾಯಕನೂರು ತಾಲ್ಲೂಕಿನ ಕೆಂಜಂಪಟ್ಟಿ ಗ್ರಾಮ ಸೇರಿದಂತೆ ವಿವಿಧೆಡೆ ಇಂತಹ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುವರು ಎಂಬ ಬಗ್ಗೆ ಕೆಲವು ಸಚಿವರು ನೀಡಿದ್ದ ಹೇಳಿಕೆಗಳೂ ಚರ್ಚೆಗೆ ಕಾರಣವಾಗಿದ್ದವು. ಕೆಲವರು ಮುಖ್ಯಮಂತ್ರಿ ಪಳನಿಸ್ವಾಮಿ ಪರ ಧ್ವನಿ ಎತ್ತಿದ್ದರೆ, ಮತ್ತೆ ಕೆಲವರು ಪಕ್ಷದ ವರಿಷ್ಠರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವರು ಎಂದಿದ್ದರು. ಈಗ ಪನ್ನೀರ್‌ಸೆಲ್ವಂ ಪರ ಭಿತ್ತಿಪತ್ರಗಳು ಕಾಣಿಸಿಕೊಂಡಿರುವುದು, ಚರ್ಚೆ ಮತ್ತಷ್ಟು ಕಾವೇರುವಂತೆ ಮಾಡಿದೆ.

‘ಪನ್ನೀರ್‌ಸೆಲ್ವಂ ಸಾಮಾನ್ಯ ಜನರ, ಬಡವರ ಮುಖ್ಯಮಂತ್ರಿ. ಅವರಿಗೆ ಅಮ್ಮನ ಆಶೀರ್ವಾದ ಇದೆ’, ‘ಪನ್ನೀರ್‌ಸೆಲ್ವಂ ಅವರೇ ಕಾಯಂ ಮುಖ್ಯಮಂತ್ರಿ’ ಎಂಬ ಘೋಷಣೆ ಇರುವ ಭಿತ್ತಿಪತ್ರಗಳು ಇವೆ.

ಈ ಭಿತ್ತಿಪತ್ರಗಳಲ್ಲಿ ಪಕ್ಷದ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ಜೆ.ಜಯಲಲಿತಾ, ಹಾಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ಚಿತ್ರಗಳು ಹಾಗೂ ‘#2021 ಸಿಎಂ ಫಾರ್‌ ಒಪಿಎಸ್‌’ ಎಂಬ ಹ್ಯಾಷ್‌ಟ್ಯಾಗ್‌ ಕೂಡ ಅಳವಡಿಸಲಾಗಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷದ ಕೆಲವು ಕಾರ್ಯಕರ್ತರು, ‘ಪಳನಿಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು ಎಂದು ಕೆಲವು ಸಚಿವರ ಹೇಳಿದಾಗ ಕೇಳಿಬಾರದ ಆಕ್ಷೇಪ ಈಗ ಪನ್ನೀರ್‌ಸೆಲ್ವಂ ಪರ ಪೋಸ್ಟರ್‌ ಹಾಕಿದಾಗ ಏಕೆ’ ಎಂದು ಮರುಪ್ರಶ್ನೆ ಹಾಕಿದರು.

ಈ ವಿಷಯ ಕುರಿತು ಪ್ರತಿಕ್ರಿಯಿಸಿರುವ ಪನ್ನೀರ್‌ಸೆಲ್ವಂ, ‘ಪಕ್ಷದ ಏಕೈಕ ಗುರಿ ಮುಂದಿನ ಚುನಾವಣೆಯಲ್ಲಿ ಜಯಸಾಧಿಸುವುದು. ಪಕ್ಷ ಗೆಲ್ಲಬೇಕು ಎಂಬುದೇ ಅಮ್ಮನ ಕನಸು. ಹೀಗಾಗಿ ಎಲ್ಲ ಕಾರ್ಯಕರ್ತರು ಜವಾಬ್ಧಾರಿಯಿಂದ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT