ವಿದ್ಯುತ್ ಸಮಸ್ಯೆ: ಕಲ್ಲಿದ್ದಲು ಸಾಗಿಸಲು 42 ಪ್ರಯಾಣಿಕ ರೈಲು ರದ್ದು

ನವದೆಹಲಿ: ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉಂಟಾಗಿರುವ ಕಲ್ಲಿದ್ದಲು ಕೊರತೆ ನಿವಾರಿಸಲು, ಕಲ್ಲಿದ್ದಲು ಸಾಗಣೆಯ ಗೂಡ್ಸ್ ರೈಲುಗಳ ಸಂಚಾರಕ್ಕಾಗಿ ದೇಶದಾದ್ಯಂತ 42 ಪ್ರಯಾಣಿಕ ರೈಲುಗಳನ್ನು ರೈಲ್ವೆಯು ರದ್ದುಗೊಳಿಸಿದೆ ಎಂದು ರಾಷ್ಟ್ರೀಯ ಸಾರಿಗೆ ಗುರುವಾರ ತಿಳಿಸಿದೆ.
ಆಗ್ನೇಯ ಕೇಂದ್ರ ರೈಲ್ವೆ ವಲಯದಲ್ಲಿ 34 ಮತ್ತು ಉತ್ತರ ರೈಲ್ವೆಯಲ್ಲಿ 8 ರೈಲುಗಳ ಸಂಚಾರ ರದ್ದಾಗಲಿದೆ. 40 ರೈಲುಗಳ ಸಂಚಾರವನ್ನು ಮೇ 24ರವರೆಗೆ ರದ್ದುಪಡಿಸಿದ್ದರೆ, ಇನ್ನೆರಡು ರೈಲುಗಳು ಮೇ 8ರಿಂದ ಸಂಚಾರ ಆರಂಭಿಸಲಿವೆ.
ಈ ಹಿಂದೆ ರದ್ದುಪಡಿಸಿದ ರೈಲುಗಳು ಸೇರಿ ಒಟ್ಟು 40 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಇದು ಮೇ 24ರವರೆಗೆ ಮುಂದುವರಿಯುವುದರಿಂದ ಒಟ್ಟು 1,081 ಟ್ರಿಪ್‌ಗಳನ್ನು ರದ್ದುಪಡಿಸಿದಂತಾಗಿದೆ ಎಂದು ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
ಕಲ್ಲಿದ್ದಲು ಸಾಗಣೆಯ ಮೇಲೆ ರೈಲ್ವೆ ಗಮನ ಕೇಂದ್ರೀಕರಿಸಿರುವುದರಿಂದ 26 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಮತ್ತು 16 ಪ್ರಯಾಣಿಕರ ವಿಶೇಷ ಅಥವಾ ಮೆಮು ರೈಲುಗಳು ಈ ಅವಧಿಯಲ್ಲಿ ಸಂಚರಿಸುವುದಿಲ್ಲ.
ಕಳೆದ ಕೆಲವು ವಾರಗಳಲ್ಲಿ ಕಲ್ಲಿದ್ದಲು ದಾಸ್ತಾನು ಸಾಗಣೆಗೆ ಆದ್ಯತೆ ನೀಡಿದ ರಾಷ್ಟ್ರೀಯ ಸಾರಿಗೆಯು, ತನ್ನ ಶೇಕಡಾ 86ರಷ್ಟು ತೆರೆದ ವ್ಯಾಗನ್‌ಗಳನ್ನು ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಕಲ್ಲಿದ್ದಲು ಸಾಗಿಸಲು ಮೀಸಲಿಟ್ಟಿದೆ.
ಇದನ್ನೂ ಓದಿ–ಗಡಿಯ ಸುರಂಗದಲ್ಲಿ 265 ಅಡಿ ಆಕ್ಸಿಜನ್ ಪೈಪ್; ಅಮರನಾಥ ಯಾತ್ರೆಯ ಮೇಲೆ ಉಗ್ರರ ಕಣ್ಣು
ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಯಾಣಿಕ ರೈಲು ಸಂಚಾರ ರದ್ದತಿಯ ನಂತರ, ರೈಲ್ವೆಯು ಕಲ್ಲಿದ್ದಲು ಸರಾಸರಿ ದೈನಂದಿನ ರೇಕ್ ಲೋಡ್‌ಗಳನ್ನು 400ಕ್ಕಿಂತಲೂ ಹೆಚ್ಚು ಮಾಡಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತ್ಯಧಿಕವಾಗಿದೆ.
ಈ ತಿಂಗಳು ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದ್ದು, ವಿವಿಧ ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಧ್ಯವಾದಷ್ಟು ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.