ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಗರ್ಭಿಣಿಯರಿಗೆ ವಿಶೇಷ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ

ಅಕ್ಷರ ಗಾತ್ರ

ಮುಂಬೈ: ಗರ್ಭಿಣಿಯರಿಗೆ ಕೋವಿಡ್‌ ಲಸಿಕೆ ನೀಡುವ ವಿಶೇಷ ಏರ್ಪಾಡನ್ನು ಮುಂಬೈನ ಬಿಎಂಸಿ ಮಾಡಿದ್ದು, 35 ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಗುರುವಾರದಿಂದ ಲಸಿಕೆ ಲಭ್ಯವಿದೆ.

ಕೇಂದ್ರ ಆರೋಗ್ಯ ಸಚಿವಾಲಯ, ಬಿಎಂಸಿ ಬುಧವಾರ ಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತಾಗಿ ಮಾರ್ಗಸೂಚಿಗಳನ್ನು ಹೊರಡಿಸಿವೆ. 'ಗರ್ಭಿಣಿಯರನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕು. ಕೋವಿಡ್‌ 19 ಸೋಂಕಿತ ಗರ್ಭಿಣಿಗೆ ಅವಧಿಗೂ ಮುನ್ನ ಹೆರಿಗೆಯಾಗುವ ಸಂಭವವಿದೆ. ಗರ್ಭಿಣಿಯರಿಗೆ ಲಸಿಕೆ ನೀಡುವುದು ನಿರ್ಣಾಯಕವಾಗಿದೆ. ಇದರಿಂದ ಇಬ್ಬರನ್ನು ಸೋಂಕಿನಿಂದ ರಕ್ಷಿಸಬಹುದು' ಎಂದು ಬಿಎಂಸಿ ಹೇಳಿದೆ.

ಮಾರ್ಗಸೂಚಿಯಲ್ಲಿ ಗರ್ಭಿಣಿಗೆ ಇತ್ತೀಚೆಗೆ ಕೋವಿಡ್‌ ಬಂದಿದ್ದರೆ ಅಥವಾ ಚೇತರಿಸಿಕೊಂಡ ವ್ಯಕ್ತಿಯ ಪ್ಲಾಸ್ಮಾದ ಸಹಾಯದಿಂದ ಚಿಕಿತ್ಸೆ ಪಡೆದಿದ್ದರೆ ಅಂತಹವರಿಗೆ 12 ವಾರಗಳ ನಂತರ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದು ಅಥವಾ ಹಾಕಿಸಿಕೊಳ್ಳದೆ ಇರುವುದನ್ನು ಗರ್ಭಿಣೆಯೇ ನಿರ್ಧರಿಸಬಹುದು ಎಂದಿದೆ.

ಶೇಕಡಾ 95ರಷ್ಟು ಪ್ರಕರಣಗಳಲ್ಲಿ ಕೋವಿಡ್‌ ಸೋಂಕಿತ ಗರ್ಭಿಣಿಯರಿಗೆ ಆರೋಗ್ಯಕರ ಹೆರಿಗೆಯಾಗಿದೆ. ಉಳಿದವರಿಗೆ ಅವಧಿಗೂ ಮುನ್ನ ಹೆರಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ 'ಎಎನ್‌ಐ' ವರದಿ ಮಾಡಿದೆ.

ಗರ್ಭಿಣಿಯರಿಗೆ ಲಸಿಕೆ ನೀಡಲು ನಮ್ಮ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಲಸಿಕೆಯಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ಗರ್ಭಿಣಿಯರಿಗೆ ತಿಳಿಸಿ ಹೇಳುತ್ತಾರೆ. ಗರ್ಭಿಣಿಯರೇ ಆಯ್ಕೆಯನ್ನು ಬಿಡಲಾಗುತ್ತದೆ ಎಂದು ಹೆಚ್ಚುವರಿ ಕಮಿಷನರ್‌ ಸುರೇಶ್‌ ಕಕನಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೆಲ ಗರ್ಭಿಣಿಯರು ಲಸಿಕೆ ಪಡೆಯಲು ಹಿಂದೇಟು
ಗರ್ಭಿಣಿಯರೂ ಒಳಗೊಂಡಂತೆ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಮಗು ಮತ್ತು ತಾಯಿಯ ಆರೋಗ್ಯ ದೃಷ್ಟಿಯಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದರೂ ಕೆಲವು ಗರ್ಭಿಣಿಯರು ಹಿಂದೇಟು ಹಾಕುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ.

35 ವರ್ಷ ಮೇಲ್ಪಟ್ಟವರು, ಅಧಿಕ ತೂಕ ಹೊಂದಿರುವವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು, ರಕ್ತ ಹೆಪ್ಪುಗಟ್ಟುವ ಅಪಾಯ ಇರುವ ಗರ್ಭಿಣಿಯರಿಗೆ ಕೊರೊನಾ ಸೋಂಕು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕೋವಿಡ್ ಪೀಡಿತ ಗರ್ಭಿಣಿಯರಿಗೆ ಅವಧಿಪೂರ್ವ ಹೆರಿಗೆ, ಶಿಶುವಿನ ತೂಕ 2.5 ಕೆ.ಜಿ.ಗಿಂತ ಕಡಿಮೆ, ಅಪರೂಪದ ಸನ್ನಿವೇಶದಲ್ಲಿ ಜನಿಸಿದ ಶಿಶು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಕೋವಿಡ್ ಲಸಿಕೆಯನ್ನು ಗರ್ಭಾವಸ್ಥೆಯ ಯಾವುದೇ ಸಮಯದಲ್ಲಾದರೂ ಪಡೆದುಕೊಳ್ಳಬಹುದು. ಆದರೆ, ಸಾಧ್ಯವಾದಷ್ಟು ಬೇಗ ಪಡೆದುಕೊಳ್ಳುವುದು ಒಳಿತು ಎಂದು ಇತ್ತೀಚೆಗೆ ಕರ್ನಾಟಕದ ಆರೋಗ್ಯ ಇಲಾಖೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT