ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

Last Updated 26 ಜೂನ್ 2021, 18:22 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 15 ವರ್ಷದ ನಂತರ ಇದೇ ಪ್ರಥಮ ಬಾರಿಗೆ ಐಷಾರಾಮಿ ಕಾರು ಬದಿಗೊತ್ತಿ ರೈಲಿನಲ್ಲಿ ತಮ್ಮ ಹುಟ್ಟೂರಿಗೆ ಪ್ರಯಾಣಿಸಿದರು.

ಇದು, ರೈಲಿನ ಚಾಲಕ ಸೇರಿ ಸಂಚಾರಕ್ಕೆ ನೆರವಾದ ಸಿಬ್ಬಂದಿಗೆ ಜೀವಿತಾವಧಿಯ ಅವಿಸ್ಮರಣಿಯ ನೆನಪಾಗಿ ದಾಖಲಾಯಿತು. ಅಲ್ಲದೆ, ಕೋವಿಂದ್‌ ಅವರು ರಾಷ್ಟ್ರಪತಿಗಳ ನಿಯೋಜಿತ ಕಾರಿಗೆ ಬದಲು ರೈಲಿನಲ್ಲಿ ಪ್ರಯಾಣಿಸಿದ ಮೊದಲ ರಾಷ್ಟ್ರಪತಿ ಎಂಬ ಹಿರಿಮೆಗೂ ಪಾತ್ರರಾದರು.

ಅವರು ದೆಹಲಿಯ ಸಫ್ಜರ್‌ಜಂಗ್ ನಿಲ್ದಾಣದಿಂದ ತಮ್ಮ ಹುಟ್ಟೂರು, ಉತ್ತರ ಪ್ರದೇಶದ ಕಾನ್ಪುರ್ ದೆಹತ್ ಜಿಲ್ಲೆಯ ಪಾರುಂಖ್‌ಗೆ ಮಹಾರಾಜ ಎಕ್ಸಪ್ರೆಸ್ ರೈಲಿನ ವಿಲಾಸಿ ಬೋಗಿಯಲ್ಲಿ ಪ್ರಯಾಣಿಸಿದರು. ಇದಕ್ಕೆ ರೈಲ್ವೆ ಪ್ರಯಾಗ್‌ರಾಜ್‌ ವಿಭಾಗದ ಜಿನ್‌ಜಾಕ್‌, ರೂರಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿತ್ತು.

‘ರಾಷ್ಟ್ರಪತಿ ಪ್ರಯಾಣಿಸಿದ ರೈಲು ಚಾಲನೆ ಮಾಡುವುದು ಜೀವಿತಾವಧಿಯಲ್ಲಿ ನನಗೆ ದೊರೆತ ಅವಕಾಶ’ ಎಂದು ಚಾಲಕ ಅಕ್ಷಯ್ ದೀಪ್‌ ಚೌಹಾಣ್ ಹೇಳಿದರೆ, ‘ಈ ಕ್ರಮವು ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸಲು ಪ್ರೇರೇಪಣೆ ಆಗಲಿದೆ’ ಎಂದು ಸಹ ಚಾಲಕ ಸಂಜಯ್‌ ಕುಮಾರ್ ಸಿಂಗ್ ಹೇಳಿದರು.

ಈ ಹಿಂದೆ ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ 2006ರಲ್ಲಿ ವಿಶೇಷ ರೈಲಿನಲ್ಲಿ ದೆಹಲಿಯಿಂದ ಡೆಹ್ರಾಡೂನ್‌ಗೆ ಪ್ರಯಾಣಿಸಿ, ಭಾರತೀಯ ಸೇನಾ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ನಿಯಮಿತವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಸ್ಥಳೀಯ ಜಿಲ್ಲಾಡಳಿತದ ಸಹಯೋಗದಲ್ಲಿ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿತ್ತು.

ದಾದ್ರಿ ನಿಲ್ದಾಣದಲ್ಲಿ ಟ್ರಾಲಿಮ್ಯಾನ್‌ ಆಗಿ ಕಾರ್ಯನಿರ್ವಹಿಸಿದ ವಿನೋದ್, ರೈಲು ಸಂಚರಿಸುವ ಮಾರ್ಗದಲ್ಲಿ ಲೆವೆಲ್‌ ಕ್ರಾಸಿಂಗ್ ಬಳಿ ಕರ್ತವ್ಯದಲ್ಲಿ ಭಾಗಿಯಾಗಿದ್ದ ವಿವೇಕ್ ಕುಮಾರ್ ಅವರೂ, ಇದೊಂದು ಅಪರೂಪದ ಸಂದರ್ಭ ಎಂದು ಪ್ರತಿಕ್ರಿಯಿಸಿದರು.

ಸಫ್ದರ್‌ಜಂಗ್ ನಿಲ್ದಾಣದಲ್ಲಿ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ರಾಷ್ಟ್ರಪತಿ ಅವರಿಗೆ ಬೀಳ್ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT