ಮಂಗಳವಾರ, ಜೂನ್ 28, 2022
28 °C

ಕೋವಿಡ್‌ ವಿರುದ್ಧ ಲಸಿಕೆ ಅಭಿವೃದ್ಧಿ– ವಿಜ್ಞಾನಿಗಳಿಗೆ ಪ್ರಧಾನಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಪಿಡುಗಿನ ವಿರುದ್ಧ ಸಮರ್ಪಕವಾಗಿ ಹೋರಾಡಲು ಭಾರತದ ವಿಜ್ಞಾನಿಗಳು ವರ್ಷದೊಳಗೆ ಭಾರತೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ (ಸಿಎಸ್‌ಐಆರ್‌) ಸದಸ್ಯರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಹಿಂದಿನ ಶತಮಾನಗಳಲ್ಲಿ ಭಾರತವು ವಿದೇಶಗಳಲ್ಲಿನ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಆಧರಿಸಬೇಕಿತ್ತು. ಆದರೆ ಈಗ ನಮ್ಮ ದೇಶದ ವಿಜ್ಞಾನಿಗಳು ವಿದೇಶಗಳಲ್ಲಿನ ತಮ್ಮ ಸಹವರ್ತಿ ವಿಜ್ಞಾನಿಗಳೊಂದಿಗೆ ಕೈಜೋಡಿಸಿ ಸಂಶೋಧನಾ ಚಟುವಟಿಕೆಗಳನ್ನು ನಡೆಸುವಂತಾಗಿರುವುದು ಹೆಮ್ಮೆಯ ವಿಚಾರ ಎಂದರು.

ಇಡೀ ಜಗತ್ತು ಅತಿ ದೊಡ್ಡ ಸವಾಲನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವರ್ಷದೊಳಗೆ ಲಸಿಕೆಗಳನ್ನು ತಯಾರಿಸಿರುವುದು ಅಭೂತಪೂರ್ವ ಸಾಧನೆಯಾಗಿದೆ ಎಂದು ಪ್ರಧಾನಿ ಹೊಗಳಿದರು.

ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ‘ಆತ್ಮನಿರ್ಭರ ಭಾರತ್‌’ (ಸ್ವಾವಲಂಬಿ) ಅಗತ್ಯದ ಬಗ್ಗೆ ಪುನರುಚ್ಚರಿಸಿದ ಮೋದಿ, ಕೋವಿಡ್‌ ಬಿಕ್ಕಟ್ಟು ಭಾರತದ ಬೆಳವಣಿಗೆಯ ವೇಗವನ್ನು ನಿಧಾನಗೊಳಿಸಬಹುದು, ಆದರೆ ನಮ್ಮ ಸಂಕಲ್ಪವನ್ನಲ್ಲ ಎಂದರು.

ಭಾರತವು ಕೃಷಿ, ಖಗೋಳ ವಿಜ್ಞಾನ, ವಿಪತ್ತು ನಿರ್ವಹಣೆ, ರಕ್ಷಣಾ ತಂತ್ರಜ್ಞಾನ, ಲಸಿಕೆ, ಜೈವಿಕ ತಂತ್ರಜ್ಞಾನ, ಬ್ಯಾಟರಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಲು ಬುಯಸಿದ್ದು, ಅದು ಕಾರ್ಯರೂಪಕ್ಕೂ ಬರುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಭಾರತವು ಈಗ ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಇಂಧನ ಉತ್ಪಾದನೆಯಲ್ಲಿ ಜಗತ್ತಿಗೆ ದಾರಿ ತೋರಿಸುತ್ತಿದೆ. ದೇಶದ ಸಾಫ್ಟ್‌ವೇರ್ ಮತ್ತು ಉಪಗ್ರಹ ಕ್ಷೇತ್ರದ ಬೆಳವಣಿಗೆಯು ಇತರ ದೇಶಗಳ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು