ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ಚುನಾವಣೆ: ಯುಪಿ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಪ್ರಿಯಾಂಕಾ ಗರಂ

Last Updated 1 ಮೇ 2021, 9:46 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಮಿಕದ ನಡುವೆ ಪಂಚಾಯತ್‌ ಚುನಾವಣೆ ನಡೆಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

ಚುನಾವಣೆ ನಡೆಸುವ ಮೂಲಕ ರಾಜ್ಯ ಸರ್ಕಾರ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದೆ. ಇದಕ್ಕೆ ರಾಜ್ಯ ಚುನಾವಣಾ ಆಯೋಗ ಬೆಂಬಲ ನೀಡಿದೆ ಎಂದಿರುವ ಪ್ರಿಯಾಂಕಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತದಾನ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸಿದ ಕಾರಣಕ್ಕೆ ಗರ್ಭಿಣಿ ಸೇರಿದಂತೆ 700 ಮಂದಿ ಶಿಕ್ಷಕರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.

‘ಕೋವಿಡ್‌ ಎರಡನೇ ಅಲೆಯ ಮುನ್ಸೂಚನೆ ಇಲ್ಲದೆ ಉತ್ತರಪ್ರದೇಶದಲ್ಲಿ ಸುಮಾರು 60,000 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗಿದೆ. ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದ ಕಾರಣಕ್ಕೆ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿ ಹರಡಿದೆ. ಇದ್ದರಿಂದ ಸೋಂಕು ನಿಯಂತ್ರಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಾಜ್ಯದಲ್ಲಿ ಸೂಕ್ತ ರೀತಿಯಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಜತೆಗೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಡುತ್ತಿದ್ದು ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ದೂರಿದರು.

ಉತ್ತರ ಪ್ರದೇಶದ ಪಂಚಾಯತ್‌ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೋವಿಡ್‌ನಿಂದಾಗಿ ಸಾವನ್ನಪ್ಪಿದ ಸರ್ಕಾರಿ ನೌಕರರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ನಾಲ್ಕು ಹಂತದ ಪಂಚಾಯತ್‌ ಚುನಾವಣೆಯ ಮತದಾನ ಗುರುವಾರ ಕೊನೆಗೊಂಡಿದ್ದು, ಅಂತಿಮ ಹಂತದಲ್ಲಿ ಶೇಕಡಾ 75ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT