ಬುಧವಾರ, ಮಾರ್ಚ್ 29, 2023
30 °C

ಪ್ರಿಯಾಂಕಾ ಗಾಂಧಿ ಎಂಬ ಬಿರುಗಾಳಿ ಚುನಾವಣೆ ಗೆಲುವಿಗೆ ಸಹಾಯಕ: ಅಜಯ್‌ ಲಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಕಾಂಗ್ರೆಸ್‌ ಪಕ್ಷವು ಪ್ರಿಯಾಂಕಾ ಗಾಂಧಿ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆ ಎದುರಿಸಬೇಕು. ಅವರೊಂದು ಬಿರುಗಾಳಿಯಂತೆ, ಚುನಾವಣೆಯಲ್ಲಿ ಎದುರಾಳಿಗಳನ್ನು ದೂಳಿಪಟ ಮಾಡಲು ಸಹಾಯಕ ಎಂದು ರಾಜ್ಯದ ಪಕ್ಷದ ಮುಖ್ಯಸ್ಥ ಅಜಯ್‌ ಕುಮಾರ್‌ ಲಲ್ಲು ಹೇಳಿದ್ದಾರೆ.

ಪ್ರಿಯಾಂಕಾ ಅವರು ಉತ್ತರ ಪ್ರದೇಶದ ಅನೇಕ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದು ಇದರಿಂದ ಯೋಗಿ ಆದಿತ್ಯನಾಥ್ ಸರ್ಕಾರ ಮುಖಭಂಗ ಅನುಭವಿಸುತ್ತಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬಹುಮತದೊಂದಿಗೆ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದ ಲಲ್ಲು ಗೆಲ್ಲುವ ಸ್ಥಾನಗಳ ಸಂಖ್ಯೆ ಹೇಳಲು ನಿರಾಕರಿಸಿದರು.  

2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಕಾಂಗ್ರೆಸ್‌ ಕೇವಲ ಏಳು ಸ್ಥಾನಗಳನ್ನು ಜಯಿಸಿತ್ತು.  

‘ನಾವು ಸಂಘಟನಾ ಶಕ್ತಿಯನ್ನು ಮತ್ತೆ ಮತ್ತೆ ಪ್ರದರ್ಶಿಸುತ್ತಿದ್ದೇವೆ. ಉತ್ತರ ಪ್ರದೇಶದಲ್ಲಿ ನಾವೇನೂ ಅಲ್ಲ ಎಂಬ ಭಾವನೆ ಬದಲಾಗಿದೆ. ಇಲ್ಲಿ ಪ್ರಿಯಾಂಕಾ ಗಾಂಧಿ ಎಂಬ ಬಿರುಗಾಳಿಯೊಂದು ಬೀಸುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಮುನ್ನುಗ್ಗಲು ಇದು ಸಹಾಯಕವಾಗಿದೆ’ ಎಂದು ಲಲ್ಲು ಹೇಳಿದರು. 

ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಏಕೆ ಘೋಷಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ. ಪ್ರಿಯಾಂಕಾ ಅವರ ಉಸ್ತುವಾರಿಯಲ್ಲಿ ಚುನಾವಣೆ ಎದುರಿಸಲಾಗುವುದು’ ಎಂದು ಹೇಳಿದರು.

‘ಪೂರ್ಣ ಬಹುಮತದೊಂದಿಗೆ ನಾವು ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

‘ಕಾಂಗ್ರೆಸ್ ಒಂದು ಸಿದ್ಧಾಂತವನ್ನು ಹೊಂದಿದ್ದು ಹೋರಾಟದ ಪ್ರತಿರೂಪವಾಗಿದೆ. ಇದು ಮಾತ್ರ ಬಿಜೆಪಿಗೆ ಪ್ರತಿಸ್ಪರ್ಧೆ ನೀಡಬಲ್ಲದು’ ಎಂದು ಲಲ್ಲು ಹೇಳಿದರು. 

ಚುನಾವಣಾ ಮೈತ್ರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಲಲ್ಲು, ‘ನಾವು ಗ್ರಾಮಗಳು, ಬಡ ಜನರು, ರೈತರು ಮತ್ತು ಸಾಮಾನ್ಯ ಜನರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು