ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವಿಚಾರ: ‘ಕುಟುಂಬದ ಹೊರಗಿನವರಿಗೆ ಚುಕ್ಕಾಣಿ’

ರಾಹುಲ್‌ ಬೆಂಬಲಿಸಿದ ಪ್ರಿಯಾಂಕಾ
Last Updated 18 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ‘ನೆಹರೂ– ಗಾಂಧಿ ಪರಿವಾರದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಬೇಕು’ ಎಂದು ರಾಹುಲ್‌ ಗಾಂಧಿ ಹೇಳಿರುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

‘ಇಂಡಿಯಾ ಟುಮಾರೊ: ಕಾನ್ವರ್ಸೇಶನ್‌ ವಿತ್‌ ದಿ ನೆಕ್ಸ್ಟ್‌ ಜನರೇಷನ್‌ ಆಫ್‌ ಪೊಲಿಟಿಕಲ್‌ ಲೀಡರ್ಸ್‌’ ಕೃತಿಯ ಲೇಖಕರಾದ ಪ್ರದೀಪ್‌ ಛಿಬ್ಬರ್‌ ಹಾಗೂ ಹರ್ಷ ಶಾ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಅಲ್ಲದೆ ರಾಹುಲ್‌ ಗಾಂಧಿ, ಆದಿತ್ಯ ಠಾಕ್ರೆ, ಅಖಿಲೇಶ್‌ ಯಾದವ್‌, ರಾಜ್ಯವರ್ಧನ ರಾಠೋಡ್‌, ಸುಪ್ರಿಯಾ ಸುಳೆ ಮುಂತಾದವರ ಸಂದರ್ಶನವೂ ಈ ಪುಸ್ತಕದಲ್ಲಿ ಇರಲಿದೆ.

‘ನಮ್ಮ ಕುಟುಂಬದ ಹೊರಗಿನ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಬೇಕು’ ಎಂಬ ಮಾತನ್ನು ರಾಜೀನಾಮೆ ಪತ್ರದಲ್ಲಿ, ರಾಹುಲ್‌ ಹೇಳದಿದ್ದರೂ ಬೇರೆ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ. ನಾನೂ ಅದನ್ನು ಒಪ್ಪುತ್ತೇನೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ರಾಹುಲ್‌ ಹಾಗೂ ಪ್ರಿಯಾಂಕಾ ಅವರ ಸಂದರ್ಶನವನ್ನು 2019ರಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗೂ ಮೊದಲು ನಡೆಸಲಾಗಿತ್ತು.

ಸೈದ್ಧಾಂತಿಕವಾಗಿ ಪಕ್ಷದ ನಿಲುವು ಸ್ಪಷ್ಟವಾಗಿತ್ತು. ಆದರೆ ಅದನ್ನು ಅಷ್ಟೇ ಸ್ಪಷ್ಟತೆಯೊಂದಿಗೆ ಜನರಿಗೆ ತಿಳಿಸಲಾಗಿಲ್ಲ ಎಂಬ ಅಭಿಪ್ರಾಯವನ್ನು ಪ್ರಿಯಾಂಕಾ ಮತ್ತು ರಾಹುಲ್‌ ವ್ಯಕ್ತಪಡಿಸಿದ್ದಾರೆ.

‘ಕಳೆದ ಸರ್ಕಾರದ ಅಂತಿಮ ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ಆಡಳಿತ ಪಕ್ಷದತ್ತ ವಲಸೆ ಹೋದರು. ಇದರಿಂದಾಗಿ ಸೈದ್ಧಾಂತಿಕ ನಿಲುವು ಸ್ವಲ್ಪ ದುರ್ಬಲಗೊಂಡಿತು. ಇದರಿಂದಾಗಿ ನಮ್ಮ ಸಂದೇಶವು ಅಷ್ಟು ಸ್ಪಷ್ಟವಾಗಿ ಜನರವರೆಗೆ ತಲುಪಲಿಲ್ಲ. ಸಿದ್ಧಾಂತದ ಸಾರ್ವಜನಿಕ ಅಭಿವ್ಯಕ್ತಿಯಲ್ಲಿ ನಾವು ವಿಫಲರಾದೆವು. ಈ ವಿಚಾರವಾಗಿ ಪಕ್ಷದ ನಾಯಕರಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ಒಬ್ಬ ರಾಜಕಾರಣಿಯಾಗಿ ನಾನು ಜನರ ತೀರ್ಪನ್ನು ಗೌರವಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡಬೇಕು ಎಂದು ಜನರು ಬಯಸಿದರು. ಸರಿ, ಇನ್ನೊಂದು ಅವಕಾಶ ಕೊಡಿ. ಕಾಂಗ್ರೆಸ್‌ ಪಕ್ಷವು ಒಮ್ಮತದಿಂದ ದೇಶವನ್ನು ಮುನ್ನಡೆಸಲು ಬಯಸುತ್ತದೆ. ಆದರೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ, ಸಂಕುಚಿತ ಮತ್ತು ಕಠೋರ ಮನಸ್ಥಿತಿಯನ್ನು ಹೊಂದಿವೆ. ಅದನ್ನು ದೇಶದ ಜನರ ಮೇಲೆ ಹೇರುತ್ತವೆ. ತನ್ನ ಸಿದ್ಧಾಂತದ ಹೇರಿಕೆಯಿಂದಾಗಿ ಬಿಜೆಪಿಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಇದೇ ಕಾರಣವಾಗಲಿದೆ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT