ರಾಜ್ಯ ಖಾತೆ ಸಚಿವರಿಗೆ ಬಡ್ತಿ: ಪ್ರಧಾನಿ ಮೋದಿ ಭರವಸೆ

ನವದೆಹಲಿ: ‘ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರಿದವರ ಕಾರ್ಯವೈಖರಿ ಅವಲೋಕಿಸಿ, ಬಡ್ತಿ ನೀಡಲಾಗುವುದು’ ಎಂದು ರಾಜ್ಯ ಖಾತೆ ಸಚಿವರಿಗೆ ಭರವಸೆ ನೀಡಿರುವ ಪ್ರಧಾನಿ ಮೋದಿ, ‘ವ್ಯರ್ಥವಾಗಿ ಸಮಯ ಕಳೆಯದೆ ನಿಮ್ಮ ಖಾತೆಯ ಬಗ್ಗೆ ಅರಿತುಕೊಳ್ಳಿ’ ಎಂದು ತಾಕೀತು ಮಾಡಿದ್ದಾರೆ.
‘ಇಷ್ಟವಿಲ್ಲದ ಇಲಾಖೆ ನೀಡಲಾಗಿದೆ, ರಾಜ್ಯ ಖಾತೆ ವಹಿಸಲಾಗಿದೆ ಎಂದು ಯಾರೂ ಭಾವಿಸಬೇಕಿಲ್ಲ. ಎಲ್ಲ ಇಲಾಖೆಗಳಿಗೂ ಮಹತ್ವವಿದೆ. ಆಡಳಿತ ನಿರ್ವಹಣೆ ಕುರಿತ ಪ್ರತಿಯೊಬ್ಬರ ದಕ್ಷತೆ ಬಡ್ತಿಗೆ ದಾರಿಯಾಗಲಿದೆ’ ಎಂದು ಪ್ರಧಾನಿ ಹೇಳಿದ್ದಾಗಿ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ನೀವು ಕೇಂದ್ರ ಸಚಿವರಾಗಿದ್ದಕ್ಕೆ ಅಭಿಮಾನಿಗಳು, ಬೆಂಬಲಿಗರು ಸನ್ಮಾನ ಮಾಡಲು ಬಯಸುತ್ತಾರೆ. ಆದರೆ, ತಕ್ಷಣ ಕ್ಷೇತ್ರಕ್ಕೆ ತೆರಳಬೇಡಿ. ಖಾತೆಯ ಬಗ್ಗೆ ಪೂರ್ಣ ಮಾಹಿತಿ ಪಡೆಯಿರಿ. ಸಂಸತ್‌ನ ಮುಂಗಾರು ಅಧಿವೇಶನದ ನಂತರವಷ್ಟೇ ಊರುಗಳತ್ತ ತೆರಳಿ’ ಎಂದು ನೂತನ ಸಚಿವರಿಗೆ ಪ್ರಧಾನಿ ತಾಕೀತು ಮಾಡಿದ್ದಾರೆ ಎಂದೂ ಅವರು ವಿವರಿಸಿದ್ದಾರೆ.
ಗಮನಕ್ಕೆ ತರಲಿ:
‘ಯಾವುದೇ ಸಚಿವಾಲಯ ಇರಲಿ. ಪ್ರತಿ ನಿರ್ಧಾರ, ಆದೇಶ, ಪ್ರಕಟಣೆ, ಕಡತ ವಿಲೇವಾರಿ ಬಗ್ಗೆ ರಾಜ್ಯ ಖಾತೆ ಸಚಿವರ ಗಮನಕ್ಕೆ ಬರದೇ ಇರಕೂಡದು ಎಂದೂ ಪ್ರಧಾನಿಯವರು ಸಂಪುಟ ದರ್ಜೆ ಸಚಿವರಿಗೆ ಸೂಚಿಸುವ ಮೂಲಕ ಕಿರಿಯರನ್ನು ಹುರಿದುಂಬಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಇಲಾಖೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರ ಕೈಗೊಳ್ಳುವ ಸಂದರ್ಭ ಕಿರಿಯ ಸಚಿವರ ಪಾಲ್ಗೊಲ್ಳುವಿಕೆಗೆ ಅವಕಾಶ ನೀಡುವಂತಾದರೆ, ಕೆಲಸ ಮಾಡುವುದೂ ಸುಲಭವಾಗಲಿದೆ. ಪಾರದರ್ಶಕತೆಯೂ ಇದ್ದಂತಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯ ಖಾತೆ ಸಚಿವರೊಬ್ಬರು ಹೇಳಿದ್ದಾರೆ.
‘ಯೋಜನೆಗಳ ಯಶಸ್ವಿ ಜಾರಿಯ ಹಿಂದೆ ಆಯಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯ ಪಾತ್ರವೂ ಮುಖ್ಯ. ಆಸಕ್ತ, ಅನುಭವಿ ಅಧಿಕಾರಿಗಳ ನೇಮಕಕ್ಕೂ ಸರ್ಕಾರ ಸಂಬಂಧಿಸಿದ ಸಚಿವರಿಗೇ ಮುಕ್ತ ಅವಕಾಶ ನೀಡಿದೆ. ರಾಜ್ಯ ಸರ್ಕಾರಗಳು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರದೊಂದಿಗೆ ಸಹಕರಿಸಿದರೆ ಯೋಜನೆಗಳನ್ನು ಜನರಿಗೆ ತಲುಪಿಸುವುದೂ ಸುಲಭವಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.
ರಾಜ್ಯದ ಶೋಭಾ ಕರಂದ್ಲಾಜೆ ಅವರಲ್ಲದೆ, ರಾಜ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಭಗವಂತ ಖೂಬಾ, ಎ.ನಾರಾಯಣಸ್ವಾಮಿ ಅವರು ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.