ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ: ಫೆ.6 ರಂದು ದೇಶಾದ್ಯಂತ 'ಚಕ್ಕಾ ಜಾಮ್'ಗೆ ಕರೆ ನೀಡಿದ ರೈತರು

Last Updated 2 ಫೆಬ್ರುವರಿ 2021, 4:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್‌ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' (ರಸ್ತೆ ಬಂದ್) ಘೋಷಿಸಿವೆ.

ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರುವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021-22ರಲ್ಲಿ ರೈತರನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆರೋಪಿಸಿದ ಅವರು, ನೀರು, ವಿದ್ಯುತ್ ಸರಬರಾಜನ್ನು ಮೊಟಕುಗೊಳಿಸಲಾಗಿದೆ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ಮೊಬೈಲ್ ಟಾಯ್ಲೆಟ್ ಬ್ಲಾಕ್‌ಗಳನ್ನು ತೆಗೆದುಹಾಕಲಾಗಿದೆ ಎಂದು ದೂರಿದರು.

ಕಿಸಾನ್ ಏಕ್ತಾ ಮೋರ್ಚಾ ಮತ್ತು 'ಟ್ರ್ಯಾಕ್ಟರ್ 2 ಟ್ವಿಟರ್' ಎಂಬ ಹೆಸರಿನ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಆರೋಪಿಸಿದೆ.

ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ಮಾತನಾಡಿ 'ಸರ್ಕಾರಿ ಅಧಿಕಾರಿಗಳ ಕೋರಿಕೆ ಮೇರೆಗೆ ಟ್ವಿಟರ್ ಖಾತೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸರ್ಕಾರದ ವಿರುದ್ಧ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕೆಲವು ಖಾಸಗಿ ವ್ಯಕ್ತಿಗಳ ಖಾತೆಗಳನ್ನು ಕೂಡ ನಿರ್ಬಂಧಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು 'ಕೃಷಿ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ ಮಾಡಿದೆ' ಎಂದು ತಿಳಿಸಿದ್ದಾರೆ.

ಫೆಬ್ರುವರಿ 6 ರಂದು ನಡೆಯುವ 'ಚಕ್ಕಾ ಜಾಮ್' ಹೇಗೆ ನಡೆಸಬೇಕೆಂಬುದನ್ನು ವಿವಿಧ ಒಕ್ಕೂಟಗಳೊಂದಿಗೆ ಚರ್ಚಿಸಿದ ನಂತರ ಸರ್ವಾನುಮತದಿಂದ ನಿರ್ಧರಿಸಲಾಗುವುದು ಎಂದು ಪಂಜಾಬ್‌ನ ರೈತ ಮುಖಂಡ ಮತ್ತು ಎಸ್‌ಕೆಎಂನ ಭಾಗವಾದ ಬಲ್ಬೀರ್ ಸಿಂಗ್ ರಾಜೇವಾಲ್ ಸುದ್ದಿಗಾರರಿಗೆ ತಿಳಿಸಿದರು.

ಪತ್ರಕರ್ತ ಸೇರಿದಂತೆ ಅನೇಕರ ವಿರುದ್ಧ ದಾಖಲಾದ ಎಫ್‌ಐಆರ್‌ಗಳಲ್ಲದೆ ಹೆಚ್ಚಿನ ಜನರನ್ನು 'ಪೊಲೀಸರು ವಶಕ್ಕೆ ಪಡೆದಿದ್ದಾರೆ'. ಫೆಬ್ರವರಿ 6ರ ನಮ್ಮ ಪ್ರತಿಭಟನೆಯು ಇಲ್ಲಿನ ಸತ್ಯವನ್ನು ವರದಿ ಮಾಡಲು ಪ್ರಯತ್ನಿಸುತ್ತಿರುವ ಪತ್ರಕರ್ತರು ಎದುರಿಸುತ್ತಿರುವ ಕಿರುಕುಳ ಮತ್ತು ಟ್ವಿಟರ್ ನಿರ್ಬಂಧಗಳ ವಿರುದ್ಧವೂ ಇರುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಕಡಿಮೆ ಹಂಚಿಕೆಯನ್ನು ಮಾಡಿದೆ. ಈ ಹಂಚಿಕೆಯ ಶೇಕಡಾವಾರು ಪ್ರಮಾಣವು 'ಕಳೆದ ಹಣಕಾಸು ವರ್ಷದಲ್ಲಿ ಶೇ 5.1 ರಿಂದ ಈ ವರ್ಷ ಶೇ 4.3ಕ್ಕೆ ಇಳಿದಿದೆ' ಎಂದು ರಾಜೇವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT