ಭಾನುವಾರ, ಜೂನ್ 26, 2022
26 °C

ಟೆಂಡರ್‌ಗಳಲ್ಲಿ 1 ಪರ್ಸೆಂಟ್ ಕಮಿಷನ್‌; ಪಂಜಾಬ್‌ ಆರೋಗ್ಯ ಸಚಿವ ಸಿಂಗ್ಲಾ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಪಂಜಾಬ್‌ ಆರೋಗ್ಯ ಸಚಿವ ವಿಜಯ್‌ ಸಿಂಗ್ಲಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕಾರಣ ಅವರನ್ನು ಸಚಿವ ಸ್ಥಾನದಿಂದ ಮಂಗಳವಾರ ವಜಾಗೊಳಿಸಲಾಗಿದೆ. ಇದರ ಬೆನ್ನಲ್ಲೇ ಸಿಂಗ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

ಸಿಂಗ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದಾಗಿ ಮುಖ್ಯಮಂತ್ರಿ  ಭಗವಂತ ಮಾನ್ ಅವರೇ ತಿಳಿಸಿದ್ದಾರೆ. 

ಎರಡು ತಿಂಗಳ ಹಿಂದೆಯಷ್ಟೇ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚಿಸಿದೆ.  ಮುಖ್ಯ ಮಂತ್ರಿ ಭಗವಂತ ಮಾನ್‌ ಅವರ ನಡೆ ಯನ್ನು ಶ್ಲಾಘಿಸಿರುವ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ‘ನೀವು ಕೈಗೊಂಡ ಕ್ರಮ ನನ್ನ ಕಣ್ಣಾಲಿಗಳನ್ನು ತೇವಗೊಳಿಸಿದವು. ಇಂದು ಇಡೀ ರಾಷ್ಟ್ರವು ಎಎಪಿ ಬಗ್ಗೆ ಹೆಮ್ಮೆ ಪಡುವಂತಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. 

‘ಸಿಂಗ್ಲಾ ಅವರು ತಮ್ಮ ಇಲಾಖೆಯ ಟೆಂಡರ್‌ಗಳು ಮತ್ತು ಖರೀದಿಗಳಲ್ಲಿ ಶೇ 1ರಷ್ಟು ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದಾರೆ ಎಂಬುದು ತಿಳಿದ ಕೂಡಲೇ, ಅವರನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೆ, ಸಿಂಗ್ಲಾ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಪೊಲೀಸರಿಗೆ ನಿರ್ದೇಶಿಸಲಾಯಿತು’ ಎಂದು ಮಾನ್‌ ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.   

‘ಇತ್ತೀಚೆಗಷ್ಟೇ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪವು ನನ್ನ ಗಮನಕ್ಕೆ ಬಂದಿತ್ತು. ಮಾಧ್ಯಮಗಳಿಗೆ ಆ ಬಗ್ಗೆ ತಿಳಿದಿರಲಿಲ್ಲ. ಬೇಕಾದರೆ ನಾನು ಅದನ್ನು ಯಾರಿಗೂ ತಿಳಿಯ ದಂತೆ ತೇಲಿಸಿ ಬಿಡಬಹುದಿತ್ತು. ಹಾಗೇನಾದರೂ ನಾನು ಮಾಡಿದ್ದರೆ, ನಮ್ಮ ಮೇಲೆ ನಂಬಿಕೆ ಇಟ್ಟಿರುವ ಲಕ್ಷಾಂತರ ಜನರಿಗೆ ದ್ರೋಹ ಬಗೆದಂತೆ ಆಗುತ್ತಿತ್ತು. ಹೀಗಾಗಿ, ನಾನು ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇನೆ’ ಎಂದು ವಿವರಿಸಿದ್ದಾರೆ.

ಭ್ರಷ್ಟಾಚಾರ ಆರೋಪಗಳನ್ನು ವಿಜಯ್‌ ಸಿಂಗ್ಲಾ ಅವರು ಒಪ್ಪಿಕೊಂಡಿರು ವುದಾಗಿ ಮಾನ್‌ ಹೇಳಿದ್ದಾರೆ.

ಭ್ರಷ್ಟಾಚಾರ ಸಹಿಸಲ್ಲ: ‘ಎಎಪಿ ಸರ್ಕಾರವು ಭ್ರಷ್ಟಾಚಾರವನ್ನು ಸಹಿಸು ವುದಿಲ್ಲ’ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಮಾನ್ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ 2015ರಲ್ಲಿ ತಮ್ಮ ಆಹಾರ ಮತ್ತು ಸರಬರಾಜು ಸಚಿವರನ್ನು ತೆಗೆದುಹಾಕಿದ್ದರು ಮತ್ತು ಆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿ ಸಿದ್ದರು ಎಂಬುದನ್ನು ನೆನಪು ಮಾಡಿ ಕೊಂಡಿದ್ದಾರೆ.

‘ಒಂದೂ ರೂಪಾಯಿಯ ಭ್ರಷ್ಟಾ ಚಾರವನ್ನು ಸಹಿಸುವುದಿಲ್ಲ. ಪಂಜಾಬ್ ಅನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡಲು ಬಯಸುತ್ತೇವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಸರ್ಕಾರ ರಚನೆಯಾದ ಎರಡೇ ತಿಂಗಳಲ್ಲಿ ಎಎಪಿಯ ಸಚಿವರೊಬ್ಬರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲ ಪಕ್ಷಗಳು ದೂರಬಹುದು. ಆದರೆ, ಈ ಕುರಿತು ಕ್ರಮ ತೆಗೆದು ಕೊಂಡಿದ್ದೂ ನಾನೇ ಅಲ್ಲವೆ’ ಎಂದು ಅವರು ಹೇಳಿದ್ದಾರೆ.  

52 ವರ್ಷದ ವಿಜಯ್ ಸಿಂಗ್ಲಾ ಅವರು ಮಾನ್ಸಾ ಕ್ಷೇತ್ರದ ಶಾಸಕ. ಅವರು ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶುಭದೀಪ್ ಸಿಂಗ್ ಸಿಧು ವಿರುದ್ಧ ಗೆದ್ದಿದ್ದರು. ಪಂಜಾಬ್‌ನಲ್ಲಿ ಎರಡು ತಿಂಗಳ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 117 ಕ್ಷೇತ್ರಗಳ ಪೈಕಿ ಎಎಪಿ 92 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಸರ್ಕಾರ ರಚಿಸಿತ್ತು.

‘ಭ್ರಷ್ಟಾಚಾರವೆಂದರೆ ದೇಶದ್ರೋಹ’
ನವದೆಹಲಿ:
ಭ್ರಷ್ಟಾಚಾರದ ಆರೋಪದ ಮೇಲೆ ತಮ್ಮದೇ ಪಕ್ಷ ಆರೋಗ್ಯ ಸಚಿವ ವಿಜಯ್‌ ಸಿಂಗ್ಲಾ ಅವರನ್ನು ವಜಾಗೊಳಿಸಿದ್ದಕ್ಕಾಗಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರನ್ನು ಅಭಿನಂದಿಸಿದ್ದಾರೆ. ಭ್ರಷ್ಟಾಚಾರವು ದೇಶದ್ರೋಹವಾಗಿದೆ ಎಂದು ಕೇಜ್ರಿವಾಲ್‌ ಹೇಳಿದರು.

ಈ ಕುರಿತು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಎಎಪಿ ಪ್ರಾಮಾಣಿಕ ಪಕ್ಷವಾಗಿದ್ದು, ಭ್ರಷ್ಟಾಚಾರ ಚಟುವಟಿಕೆಗಳನ್ನು ಸಹಿಸುವುದಿಲ್ಲ’ ಎಂದು ತಿಳಿಸಿದರು.

‘ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ನಮ್ಮದೇ ನಾಯಕರನ್ನೂ ಬಿಡುವುದಿಲ್ಲ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ತಮ್ಮ ಸಚಿವರನ್ನು ತಕ್ಷಣವೇ ಹುದ್ದೆಯಿಂದ ಕೆಳಗಿಳಿಸಿರುವ ಪಂಜಾಬ್ ಸಿ.ಎಂ ಭಗವಂತ್ ಬಗ್ಗೆ ಹೆಮ್ಮೆ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು