ಸೋಮವಾರ, ಜನವರಿ 17, 2022
21 °C

ಸಿಎಂ ಚನ್ನಿ, ಡಿಸಿಎಂ ರಾಂಧವ ಮತ್ತು ಸಿಧು ಗೊಂದಲದಲ್ಲಿದ್ದಾರೆ: ಅಮರಿಂದರ್ ಸಿಂಗ್

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಉಪಮುಖ್ಯಮಂತ್ರಿ ಸುಖಜಿಂದರ್ ರಾಂಧವ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ತುಂಬಾ ಗೊಂದಲದಲ್ಲಿ ಪ್ರತಿಕ್ರಿಯಿಸುತ್ತಿರುವಂತೆ ತೋರುತ್ತಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪಂಜಾಬ್‌ ಭೇಟಿ ಸಂದರ್ಭ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಪಂಜಾಬ್ ಸರ್ಕಾರದಿಂದ 'ಅಜಾಗರೂಕ' ಮತ್ತು 'ಬೇಜವಾಬ್ದಾರಿ' ಪ್ರತಿಕ್ರಿಯೆ ಬಂದಿದೆ ಎಂದು ಟೀಕಿಸಿದ್ದಾರೆ.

ಕೆಲವು ಪ್ರತಿಭಟನಾಕಾರರು ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಬುಧವಾರ, ಫಿರೋಜ್‌ಪುರದಲ್ಲಿ ಏರ್ಪಡಿಸಲಾಗಿದ್ದ ಪ್ರಧಾನಿ ರ್‍ಯಾಲಿಯನ್ನು ಭದ್ರತಾ ಲೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಬೇಕಾಯಿತು. ಅವರ ಬೆಂಗಾವಲು ಪಡೆ ಫ್ಲೈಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಕಳೆದಿತ್ತು. ಪ್ರಧಾನಿಯವರು ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿತ್ತು.

ಆ ಬಗ್ಗೆ ಪ್ರಕ್ತಿಕ್ರಿಯಿಸಿರುವ ಅಮರಿಂದರ್ ಸಿಂಗ್, ‘ಚನ್ನಿ, ರಾಂಧವ ಮತ್ತು ಸಿದ್ದು ಗೊಂದಲದಲ್ಲಿ ವರ್ತಿಸುತ್ತಿದ್ದಾರೆ. ಅವರು ತಮ್ಮ ಕೆಲಸವನ್ನು ಹೇಗೆ ಮಾಡಬೇಕು ಮತ್ತು ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿದಿಲ್ಲ’ಎಂದು ಟೀಕಿಸಿದ್ದಾರೆ. ಜವಾಬ್ದಾರಿಯನ್ನು ನಿಭಾಯಿಸುವ ಬದಲು ಓಡಿಹೋಗುತ್ತಿದ್ದಾರೆ. ತಮ್ಮ ಹೊಣೆಯನ್ನು ಜೂನಿಯರ್‌ಗಳಿಗೆ ವರ್ಗಾಯಿಸುವುದು ಹೇಡಿತನ ಮತ್ತು ನಿಜವಾದ ನಾಯಕತ್ವವಲ್ಲ ಎಂದಿದ್ದಾರೆ.

ಭದ್ರತಾ ಲೋಪದ ಕುರಿತು ಚನ್ನಿ ಅವರ ‘ಗೊಂದಲಮಯ' ಮತ್ತು 'ವಿರೋಧಾಬಾಸ'ದ ಹೇಳಿಕೆಗಳನ್ನು ಉಲ್ಲೇಖಿಸಿದ ಅಮರಿಂದರ್ ಸಿಂಗ್, ‘ಬೆಳಿಗ್ಗೆ ಅವರು ಘಟನೆಯ ಕುರಿತ ತನಿಖೆಗೆ ಆದೇಶಿಸುತ್ತಾರೆ ಮತ್ತು ಸಂಜೆಯ ವೇಳೆಗೆ ಏನೂ ಆಗಿಲ್ಲ ಎಂದು ನಿರಾಕರಿಸುತ್ತಾರೆ’ ಅಮರಿಂದರ್ ಸಿಂಗ್ ಕುಟುಕಿದ್ದಾರೆ.

ಪ್ರಧಾನಿ ಜೀವಕ್ಕೆ ಅಪಾಯ ಬಂದರೆ ಗುಂಡುಗಳಿಗೆ ಎದೆಯೊಡ್ಡುತ್ತೇನೆ ಎಂಬ ಮುಖ್ಯಮಂತ್ರಿ ಹೇಳಿಕೆಯನ್ನು ಅವರು ವ್ಯಂಗ್ಯ ಮಾಡಿದ್ದಾರೆ.

‘ಗುಂಡುಗಳಿಗೆ ಎದೆಯೊಡ್ಡಲು ನೀವು ಆ ಪ್ರದೇಶದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯಾಗಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಿ’ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಭದ್ರತಾ ಏಜೆನ್ಸಿಗಳು ಪ್ರಧಾನಿಯವರಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಬೇಕು ಎಂಬ ಗೃಹ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ರಾಂಧವಾ ಅವರ ಹೇಳಿಕೆಗೆ ಮಾಜಿ ಸಿಎಂ ಕಿಡಿಕಾರಿದರು.

‘ಪ್ರಧಾನಿ ಅವರು ಪಂಜಾಬ್‌ನಲ್ಲಿದ್ದಾಗ ಅವರಿಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸುವುದು ಪಂಜಾಬ್ ಸರ್ಕಾರದ ಕರ್ತವ್ಯವಾಗಿದೆ ಎಂಬ ಅಂಶವನ್ನು ಉಪ ಮುಖ್ಯಮಂತ್ರಿ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಅವರು ಹೇಳಿದರು: ‘ಇತ್ತೀಚೆಗೆ, ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯ ವಿಸ್ತರಣೆ ಕುರಿತಂತೆ ನೀವು ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯ ಎಂದು ಹೇಳಿದ್ದೀರಿ. ಇಂದು ನೀವು ಅದೇ ಕಾನೂನು ಮತ್ತು ಸುವ್ಯವಸ್ಥೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಏಜೆನ್ಸಿಗಳ ಜವಾಬ್ದಾರಿ ಎಂದು ಹೇಳುತ್ತಿದ್ದೀರಿ’ ಎಂದು ಟೀಕಿಸಿದ್ದಾರೆ.

‘ಪ್ರಧಾನಿ ಅವರ ಭದ್ರತಾ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ತಿಳಿದಿಲ್ಲದ ನೀವು ಆ ವಿಷಯಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದು ಉತ್ತಮ’ ಎಂದು ಸಿದುಗೆ ಅಮರಿಂದರ್ ಸಿಂಗ್ ತಿಳಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು