ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Punjab Elections: ಚನ್ನಿ ಸಿ.ಎಂ ಅಭ್ಯರ್ಥಿ- ಕಾಂಗ್ರೆಸ್‌ನಲ್ಲಿ ಒತ್ತಡ

Last Updated 22 ಜನವರಿ 2022, 17:32 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ ವಿಧಾನಸಭೆಗೆ ಮುಂದಿನ ತಿಂಗಳುನಡೆಯಲಿರುವ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ಬೇಡಿಕೆ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ ಪರಿಶಿಷ್ಟ ಜಾತಿಯ ಮೊದಲ ವ್ಯಕ್ತಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಹಲವು ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ.

ಈ ಬಾರಿ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಎಂಬುದು ಕಾಂಗ್ರೆಸ್‌ ಹೈಕಮಾಂಡ್‌ನ ಈವರೆಗಿನ ತೀರ್ಮಾನವಾಗಿದೆ.2012 ಮತ್ತು 2017ರ ಚುನಾವಣೆಯಲ್ಲಿ ಕಾಂಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿತ್ತು.

ತಾವು ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬುದನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ಚನ್ನಿ ಅವರು ಸಾಬೀತು ಮಾಡಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಗೆ ಸಂಬಂಧಿಸಿ ಪಕ್ಷದಲ್ಲಿ ಗೊಂದಲ ಇರಬಾರದು. ಎಲ್ಲರ ನಿರೀಕ್ಷೆಯನ್ನೂ ಮೀರಿ ಚನ್ನಿ ಅವರು ಕೆಲಸ ಮಾಡಿದ್ದಾರೆ ಎಂದು ಹಿರಿಯ ಮುಖಂಡ ಮತ್ತು ಸಚಿವ ಬ್ರಹ್ಮ ಮೊಹೀಂದ್ರ ಹೇಳಿದ್ದಾರೆ.

ಅಮರಿಂದರ್‌ ಸಿಂಗ್‌ ಅವರಿಂದ ಕಾಂಗ್ರೆಸ್‌ ಪಕ್ಷವು ರಾಜೀನಾಮೆ ಪಡೆದ ಬಳಿಕ, ಚನ್ನಿ ಅವರನ್ನು ಕಳೆದ ವರ್ಷ ಮುಖ್ಯಮಂತ್ರಿ ಮಾಡಲಾಗಿತ್ತು.

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಪ್ರಮುಖ ಪ್ರತಿಸ್ಪರ್ಧಿಯಾಗಿ ಮೂಡಿ ಬಂದಿದೆ. ಆ ಪಕ್ಷವು ಸಂಸದ ಮತ್ತು ರಾಜ್ಯ ಘಟಕದ ಅಧ್ಯಕ್ಷ ಭಗವಂತ ಮಾನ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಆ ಬಳಿಕ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿಯೂ ಬಲವಾಗಿದೆ.

ಪಂಜಾಬ್‌ನ ಇನ್ನೊಂದು ಪ್ರಮುಖ ಪಕ್ಷವಾದ ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ, ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್‌ ಬಾದಲ್‌ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚು.

ಪಕ್ಷವು ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವುದಿಲ್ಲ ಎಂಬ ಭಾವನೆಯು ಪಕ್ಷಕ್ಕೆ ದುಬಾರಿಯಾಗಬಹುದು ಎಂದು ಸಚಿವ ರಾಣಾ ಗುರ್ಜೀತ್‌ ಸಿಂಗ್‌ ಅವರು ಹೇಳಿದ್ದಾರೆ. ಮೂರು ತಿಂಗಳ ಅವಧಿಯಲ್ಲಿ ಚನ್ನಿ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸಚಿವ ತೃಪ್ತ್‌ ರಾಜಿಂದರ್‌ ಬಾಜ್ವಾ ಮತ್ತು ಶಾಸಕ ಹರದೇವ್‌ ಸಿಂಗ್‌ ಲಡ್ಡಿ ಶೇರೊವಾಲಿಯಾ ಅವರು ಕೂಡ ಚನ್ನಿ ಬೆಂಬಲಕ್ಕೆ ನಿಂತಿದ್ದಾರೆ.

ನವಜೋತ್‌ ಸಿಂಗ್‌ ಸಿಧು ಅವರು ಪಂಜಾಬ್‌ ಕಾಂಗ್ರೆಸ್‌ನ ಮುಖ್ಯಸ್ಥ. ಚನ್ನಿ ಅವರು ಸರ್ಕಾರದ ಮುಖ್ಯಸ್ಥ. ಸಾಮೂಹಿಕ ನಾಯಕತ್ವದಲ್ಲಿಯೇ ಪಕ್ಷವು ಚುನಾವಣೆ ಎದುರಿಸಲಿದೆ ಎಂದು ಕಳೆದ ವಾರ ಚಂಡೀಗಡಕ್ಕೆ ಬಂದಿದ್ದ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದರು.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಚನ್ನಿ ಅವರೂ ಇತ್ತೀಚೆಗೆ ಹೇಳಿದ್ದರು.

ಸಮೀಕ್ಷೆಯಲ್ಲಿ ಚನ್ನಿ ಮುಂದೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆಪ್ತ ನಿಖಿಲ್ ಆಳ್ವಾ ಅವರು ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಟ್ವಿಟರ್‌ನಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆ ಪ್ರಕಾರ, ಚನ್ನಿ ಅವರಿಗೆ ಶೇ 68.7ರಷ್ಟು ಮತಗಳು ಸಿಕ್ಕಿವೆ. 1,283 ಮಂದಿ ಚನ್ನಿ ಅವರಿಗೆ ಮತ ಹಾಕಿದ್ದರು.

ಸಿಧು ಅವರಿಗೆ ಸಿಕ್ಕಿದ್ದು ಶೇ 11.5ರಷ್ಟು ಮತಗಳು ಮಾತ್ರ. ನಂತರದ ಸ್ಥಾನದಲ್ಲಿ ಸುನಿಲ್ ಜಾಖಡ್‌ ಅವರು (ಶೇ 9.3) ಇದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯ ಅಗತ್ಯ ಇಲ್ಲ ಎಂದವರು ಶೇ 10.4ರಷ್ಟು ಮಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT