ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಕರಾಳ ದಿನ: ಗಡಿಯತ್ತ ರೈತರ ಪಯಣ

ಕೇಂದ್ರದ ಕೃಷಿ ಕಾನೂನುಗಳಿಗೆ ವಿರೋಧ; ರೈತ ಪ್ರತಿಭಟನೆಗೆ ಆರು ತಿಂಗಳು ಪೂರ್ತಿ
Last Updated 24 ಮೇ 2021, 21:39 IST
ಅಕ್ಷರ ಗಾತ್ರ

ಚಂಡೀಗಡ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಆರು ತಿಂಗಳು ತುಂಬುತ್ತಿರುವುದರಿಂದ, ಮೇ 26 ರಂದು ಕರಾಳ ದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ವಿವಿಧ ಪ್ರದೇಶಗಳಿಂದ ರೈತರು ದೆಹಲಿ ಗಡಿಯತ್ತ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಕೇಂದ್ರ ಜಾರಿ ಮಾಡಿರುವ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ದೆಹಲಿ ಹೊರಭಾಗದ ಸಿಂಘು, ಟಿಕ್ರಿ ಹಾಗೂ ಗಾಜಿಪುರ್‌ ಗಡಿಗಳಲ್ಲಿ ರೈತರು ಕಳೆದ ನವೆಂಬರ್‌ ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರೈತರ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಜನವರಿ 22ರ ನಂತರ ಮಾತುಕತೆ ನಡೆದಿಲ್ಲ. ಮಾತುಕತೆಯನ್ನು ಪುನರಾರಂಭಿಸುವಂತೆ ಸಂಯುಕ್ತ ಕಿಸಾನ್‌ ಮೋರ್ಚಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆಶುಕ್ರವಾರ ಪತ್ರ ಬರೆದಿದೆ.

‘ದೆಹಲಿ ಗಡಿಗಳತ್ತ ದೊಡ್ಡ ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸಹ ಅಗತ್ಯ ವಸ್ತುಗಳೊಂದಿಗೆ ದೆಹಲಿಯ ಗಡಿಯತ್ತ ಪ್ರಯಾಣ ಆರಂಭಿಸಿದ್ದಾರೆ. ಪ್ರತಿ ಭಾನುವಾರ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರ ಗುಂಪುಗಳು ಗಡಿಯತ್ತ ಹೋಗುತ್ತವೆ. ಒಂದು ವಾರದ ನಂತರ ಅವರು ಮರಳುತ್ತಾರೆ ಮತ್ತು ಹೊಸ ಗುಂಪುಗಳು ಅವರ ಸ್ಥಾನವನ್ನು ತುಂಬುತ್ತವೆ’ ಎಂದು ಭಾರತ್‌ ಕಿಸಾನ್‌ ಯೂನಿಯನ್‌ನ ಮುಖಂಡರು ಹೇಳಿದ್ದಾರೆ.

ಸಿಧು ಬೆಂಬಲ: ‘ರೈತರ ಹೋರಾಟವನ್ನು ಬೆಂಬಲಿಸಿ ನಾಳೆ ಬೆಳಿಗ್ಗೆ 9.30ಕ್ಕೆ ನನ್ನ ಎರಡೂ ಮನೆಗಳ ಮುಂದೆ ಕಪ್ಪು ಬಾವುಟವನ್ನು ಹಾರಿಸುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ನವಜೋತ್‌ಸಿಂಗ್‌ ಸಿಧು ಹೇಳಿದ್ದಾರೆ. ಈ ಹೋರಾಟಕ್ಕೆ ಎಲ್ಲರೂ ಸಾಥ್‌ ನೀಡಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರತಿಭಟನೆ ಬೇಡ: ಮನವಿ
ಪ್ರತಿಭಟನೆಯಲ್ಲಿ ಸಾವಿರಾರು ಜನರು ಸೇರುವುದರಿಂದ ಕೊರೊನಾ ಸೋಂಕು ಪಸರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡಬೇಕೆಂದು ಹಲವು ನಾಯಕರು ರೈತರಲ್ಲಿ ಮನವಿ ಮಾಡಿದ್ದಾರೆ.

‘ದಯವಿಟ್ಟು ಬೇಜವಾಬ್ದಾರಿಯುತ ವರ್ತನೆ ತೋರಬೇಡಿ. ಜನರ ಜೀವವನ್ನೇ ಅಪಾಯಕ್ಕೆ ಒಡ್ಡಬಲ್ಲ ಇಂಥ ಪ್ರತಿಭಟನೆ ಸ್ವೀಕಾರಾರ್ಹವಲ್ಲ’ ಎಂದು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸೇರಿದಂತೆ 12 ರಾಜಕೀಯ ಪಕ್ಷಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT