ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ ಕಳಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿ: ಪಂಜಾಬ್‌ನಲ್ಲಿ ಕೇಜ್ರಿವಾಲ್‌ ಪ್ರಯೋಗ

Last Updated 13 ಜನವರಿ 2022, 10:13 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ ಚುನಾಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ನಿರ್ಧಾರ ಕೈಗೊಳ್ಳಲು ಜನರಿಗೇ ಅವಕಾಶ ನೀಡಿರುವುದಾಗಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ಘೋಷಿಸಿದ್ದಾರೆ. ಆದರೆ, ತಮ್ಮ ಆಯ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಗವಂತ್‌ ಮಾನ್‌ ಎಂದು ಅವರು ಸೂಚಿಸಿದ್ದಾರೆ.

ತಾವು ಯಾವುದೇ ಕಾರಣಕ್ಕೂ ಪಂಜಾಬ್‌ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಪಂಜಾಬ್ ಘಟಕದ ಅಧ್ಯಕ್ಷ ಮತ್ತು ಸಂಸದ ಮಾನ್‌ ಮತ್ತು ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಅವರ ಸಮ್ಮುಖದಲ್ಲಿ ಕೇಜ್ರಿವಾಲ್‌ ಅವರು ಮೊಬೈಲ್ ಸಂಖ್ಯೆಯನ್ನು ಬಿಡುಗಡೆ ಮಾಡಿದರು. ಎಎಪಿಯಿಂದ ಯಾರು ಸಿಎಂ ಆಭ್ಯರ್ಥಿಯಾಗಬೇಕು ಎಂಬುದನ್ನು ಜನರು ತಮ್ಮ ಧ್ವನಿ ರೆಕಾರ್ಡ್ ಮಾಡಿ, ಎಸ್‌ಎಂಎಸ್ ಅಥವಾ ವಾಟ್ಸಾಪ್‌ಗೆ ಜ. 17 ರ ಸಂಜೆ 5 ಗಂಟೆಯೊಳಗೆ ಕಳುಹಿಸಬೇಕು’ ಎಂದು ಅವರು ಹೇಳಿದ್ದಾರೆ.

‘ನಾನು ಸ್ಪಷ್ಟಪಡಿಸುವುದೇನೆಂದರೆ, ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಕೇಜ್ರಿವಾಲ್‌ ಇಲ್ಲ’ ಎಂದೂ ಅವರು ತಿಳಿಸಿದರು.

2021ರ ಜೂನ್‌ನಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಜ್ರಿವಾಲ್‌, ‘ಸಿಖ್‌ ಸಮುದಾಯದವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಅವರ ಬಗ್ಗೆ ಇಡೀ ಪಂಜಾಬ್‌ ಹೆಮ್ಮೆಪಡಲಿದೆ’ ಎಂದು ಹೇಳಿದ್ದರು.

ತಾವು ಮಾನ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಬಯಸಿರುವುದಾಗಿಯೂ, ಪಂಜಾಬ್‌ ಜನರೂ ಅವರನ್ನೇ ಆಯ್ಕೆ ಮಾಡಬೇಕಾಗಿಯೂ ಕೇಜ್ರಿವಾಲ್‌ ಮನವಿ ಮಾಡಿದರು.

‘ಭಗವಂತ್ ಮಾನ್ ನನ್ನ ಕಿರಿಯ ಸಹೋದರ. ಆದರೆ, ಎಎಪಿಯ ಹಿರಿಯ ನಾಯಕ. ನಾನು ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಮಾಡಬೇಕೆಂದು ಬಯಸಿದೆ. ಆದರೆ ಅವರು ಮೊದಲು ಜನರನ್ನು ಕೇಳಬೇಕು ಎಂದು ಹೇಳಿದರು. ಮುಚ್ಚಿದ ಬಾಗಿಲಿನ ಹಿಂದೆ ಸಿಎಂ ಅಭ್ಯರ್ಥಿಯನ್ನು ನಿರ್ಧರಿಸುವ ಪರಿಪಾಠ ನಿಲ್ಲಬೇಕು,’ ಎಂದು ಕೇಜ್ರಿವಾಲ್‌ ಹೇಳಿದರು.

‘ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂದು ಪಕ್ಷವೊಂದು ಜನರನ್ನು ಕೇಳುತ್ತಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು’ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.

‘ಮೊಬೈಲ್‌ ಸಂಖ್ಯೆ 7074870748ಕ್ಕೆ ಜನ ಕರೆ ಮಾಡಬಹುದು, ಸಂದೇಶ ಕಳುಹಿಸಬಹುದು ಅಥವಾ ವಾಟ್ಸಾಪ್ ಮಾಡಬಹುದು. ಬಹುಪಾಲು ಜನರು ಇಷ್ಟಪಡುವ ನಾಯಕನನ್ನು ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುವುದು,’ ಎಂದು ಅವರು ಹೇಳಿದರು.

ಪಂಜಾಬ್‌ನಲ್ಲಿ ಫೆ. 14ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT