ಸಿಧು, ಮಜಿಥಿಯಾ ಜನ ಸಾಮಾನ್ಯರ ವಿಚಾರಗಳನ್ನು ತುಳಿಯುತ್ತಿರುವ ಆನೆಗಳು: ಕೇಜ್ರಿವಾಲ್

ಅಮೃತಸರ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಜನ ಸಾಮಾನ್ಯರ ವಿಚಾರಗಳನ್ನು ತುಳಿಯುತ್ತಿರುವ ʼರಾಜಕೀಯದ ದೊಡ್ಡ ಆನೆಗಳುʼ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಸಿಧು ಹಾಗೂ ಮಜಿಥಿಯಾ ಅವರು ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದಿಂದ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯುತ್ತಿದ್ದಾರೆ.
ಚುನಾವಣೆಯನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ʼಇವರಿಬ್ಬರೂ (ಸಿಧು ಹಾಗೂ ಮಜಿಥಿಯಾ) ರಾಜಕೀಯದ ದೊಡ್ಡ ಆನೆಗಳಾಗಿದ್ದು, ಜನಸಾಮಾನ್ಯರ ಸಮಸ್ಯೆಗಳು ಇವರ ಪಾದದಡಿಯಲ್ಲಿ ಸಿಲುಕಿ ಪುಡಿಪುಡಿಯಾಗಿವೆ. ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಿರುವ ಎಎಪಿ ಅಭ್ಯರ್ಥಿ ಜೀವನ್ ಜೋತ್ ಮಾತ್ರವೇ ಗೆಲುವು ಸಾಧಿಸಲಿದ್ದಾರೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಧು ಇಲ್ಲಿನ ಜನರಿಗೆ ಏನೂ ಮಾಡಿಲ್ಲ. ಅಮೃತಸರ ಪೂರ್ವ ಕ್ಷೇತ್ರಕ್ಕಾಗಿ ಕೆಲಸ ಮಾಡದ ಮಜಿಥಿಯಾ, ಸಿಧು ಅವರನ್ನು ಸೋಲಿಸುವುದಕ್ಕಾಗಿ ಆಗಮಿಸಿದ್ದಾರೆ ಅಷ್ಟೇ ಎಂದು ದೆಹಲಿ ಸಿಎಂ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಯಾರ ಪರವೂ ಇಲ್ಲ ಅಲೆ, ಎಎಪಿ ಹೆಚ್ಚು ಸ್ಥಾನದ ನಿರೀಕ್ಷೆ
ʼಬೇರೆಬೇರೆ ರಾಜಕೀಯ ಪಕ್ಷಗಳಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿರುವ ಸಾಕಷ್ಟು ಉತ್ತಮ ಅಭ್ಯರ್ಥಿಗಳು ಇದ್ದಾರೆ. ನಮ್ಮ ಪಕ್ಷಕ್ಕೆ ಬರುವಂತೆ ಅವರೆಲ್ಲರಿಗೂ ಕೇಳಿಕೊಳ್ಳುತ್ತೇನೆ. ನಮ್ಮ ಪಕ್ಷದ ಭಗವಂತ ಮಾನ್ ಅವರು ಶ್ರಮಜೀವಿ ಮತ್ತು ಪ್ರಮಾಣಿಕ ಎಂದು ನಾನು ಹೇಳಿದರೆ, ವಿರೋಧಿಗಳು ಕೆಟ್ಟದಾಗಿ ಭಾವಿಸುತ್ತಾರೆ. ಏಕೆಂದರೆ ಅವರೆಲ್ಲ ಭ್ರಷ್ಟರುʼ ಎಂದು ಟೀಕಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಎಎಪಿಯು ಬಿಜೆಪಿಯ ಭಾಗವಾಗಿ ಕಣಕ್ಕಿಳಿಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಚನ್ನಿ (ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ) ಸಾಹೇಬರ ಮೇಲೆ ಇ.ಡಿ ದಾಳಿ ಮಾಡಿಸುವಂತೆ ನಾನು ಬಿಜೆಪಿಯವರಿಗೆ ಹೇಳಿದ್ದೇನೆಯೇ? ನಾನು ಅಷ್ಟು ಶಕ್ತಿಶಾಲಿಯಾಗಿದ್ದರೆ, ಮತ್ತಷ್ಟು ಸಲ ಇ.ಡಿ ದಾಳಿ ನಡೆಸುವಂತೆ ಸೂಚಿಸುತ್ತಿದ್ದೆʼ ಎಂದು ತಿರುಗೇಟು ನೀಡಿದ್ದಾರೆ.
ಹಾಗೆಯೇ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ, ಕೊಳಕು ರಾಜಕೀಯವು ವ್ಯವಸ್ಥೆಯ ಮೇಲೆ ಪ್ರಭುತ್ವ ಸಾಧಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಸಿಎಂ ಚನ್ನಿ ಅಳಿಯನ ಮನೆ ಮೇಲೆ ದಾಳಿ ಮಾಡಿದ ಇ.ಡಿ
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.