ಉತ್ತರಾಖಂಡ: ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ

ಡೆಹ್ರಾಡೂನ್: ಉತ್ತಾರಂಖಡದ ಹನ್ನೊಂದನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಭಾನುವಾರ ಅಧಿಕಾರ ಸ್ವೀಕರಿಸಿದರು. ಇವರ ಜತೆ ಹತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪಕ್ಷದ ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಓದಿ: ಸಿಎಂ ಮಮತಾರನ್ನು ಕೆಳಗಿಳಿಸಲು ರಾವತ್ ರಾಜೀನಾಮೆಯೆಂಬ ಬಿಜೆಪಿಯ ನೈತಿಕ ದಾಳ?
45 ವರ್ಷದ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ ಅತಿ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿದ್ದಾರೆ.
ವಿಧಾನಸಭೆಯಲ್ಲಿ ಖಾತಿಮಾ ಕ್ಷೇತ್ರವನ್ನು ಪ್ರತಿನಿಧಿಸುವ ಧಾಮಿ ಅವರು ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಜೊತೆಗೆ ಗುರುತಿಸಿಕೊಂಡಿದ್ದು, ಉತ್ತರಾಖಂಡದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಧಾಮಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಶನಿವಾರ ಆಯ್ಕೆಯಾಗಿದ್ದರು. ಅವರು ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಆಪ್ತರು ಎಂದು ಹೇಳಲಾಗಿದೆ.
ಓದಿ: ಉತ್ತರಾಖಂಡ: ಪುಷ್ಕರ್ ಸಿಂಗ್ ಧಾಮಿ ನೂತನ ಮುಖ್ಯಮಂತ್ರಿ
ರಾಜ್ಯ ವಿಧಾನಸಭೆಗೆ ನಿಗದಿತ ಅವಧಿಯಲ್ಲಿ ನಿಯಮಾನುಸಾರ ಆಯ್ಕೆಯಾಗದ ಕಾರಣ ಹಿಂದಿನ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಅವರು ಶುಕ್ರವಾರ ರಾಜೀನಾಮೆಯನ್ನು ಸಲ್ಲಿಸಿದ್ದರು. ಹೀಗಾಗಿ ಬಿಜೆಪಿಯು ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆರಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.