ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಸಿಂಗು ಗಡಿಯಲ್ಲಿ ಬಳ್ಳಾರಿ ವೈದ್ಯ!

ದೆಹಲಿ ಮುಷ್ಕರ ನಿರತ ರೈತರ ಸೇವೆ ಮಾಡಿದ ಡಾ.ಎನ್.ಪ್ರಮೋದ್
Last Updated 4 ಫೆಬ್ರುವರಿ 2021, 3:30 IST
ಅಕ್ಷರ ಗಾತ್ರ

ಬಳ್ಳಾರಿ: ‘ಕನ್ನಡಿಗನಾದ ನನಗೆ ಪಂಜಾಬ್‌ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಅವರ ಮುಖಭಾವ, ಕೈ ಸಂಜ್ಞೆಗಳಿಂದಲೇ ಅವರ ಸಮಸ್ಯೆ ಏನೆಂದು ಗೊತ್ತಾಗುತ್ತಿತ್ತು. ನಾನು ಅವರ ಆರೋಗ್ಯ ಸಮಸ್ಯೆಗಳ ಬಗ್ಗೆಯಷ್ಟೇ ಕೇಳುತ್ತಿರಲಿಲ್ಲ. ಮುಷ್ಕರದಲ್ಲಿ ಅವರು ಹೇಗೆ ಪಾಲ್ಗೊಂಡಿದ್ದಾರೆ ಎಂದೂ ಕೇಳುತ್ತಿದ್ದೆ. ಅವರ ಮನೆ ಸದಸ್ಯರ ಬಗ್ಗೆಯೂ ವಿಚಾರಿಸುತ್ತಿದ್ದೆ. ಅದೇ ನಮ್ಮನ್ನು ಭಾಷೆಯ ಗಡಿ ಮೀರಿ ಬೆಸೆದಿತ್ತು..’

–ಎಂಟು ದಿನಗಳ ಕಾಲ ದೆಹಲಿಯ ಸಿಂಗು ಗಡಿಯಲ್ಲಿ ರೈತರ ಮುಷ್ಕರದ ಪ್ರಮುಖ ವೇದಿಕೆಯ ಹಿಂಭಾಗದ ಟೆಂಟ್‌ನಲ್ಲಿ ಕುಳಿತು ಆರೋಗ್ಯ ಸೇವೆ ನೀಡಿದ ಬಳ್ಳಾರಿಯ ವೈದ್ಯ ಡಾ.ಎನ್‌.ಪ್ರಮೋದ್‌ ತಮ್ಮ ಅನುಭವವನ್ನು ಸ್ಮರಿಸಿಕೊಂಡಿದ್ದು ಹೀಗೆ.

ಎಐಡಿಎಸ್‌ಓ ಅಖಿಲ ಭಾರತ ಉಪಾಧ್ಯಕ್ಷ ಹಾಗೂ ಎಸ್‌ಯುಸಿಐಸಿ ಜಿಲ್ಲಾ ಸಮಿತಿ ಸದಸ್ಯರಾಗಿರುವ ಡಾ.ಪ್ರಮೋದ್‌ ಮುಷ್ಕರ ನಿರತರಿಗೆ ಆರೋಗ್ಯ ಸೇವೆ ನೀಡುವ ಬಗ್ಗೆ ಎಂದೂ ಯೋಚಿಸಿರಲಿಲ್ಲ. ಆದರೆ ರೈತರಿಗೆ ಬೆಂಬಲವಾಗಿ ನಿಂತಿರುವ ಮೆಡಿಕಲ್‌ ಸರ್ವಿಸ್‌ ಸೆಂಟರ್‌ನಿಂದ ಜನವರಿ 27ರಂದು ಬಂದ ಕರೆಯೊಂದು ಅವರನ್ನು ದೆಹಲಿಯೆಡೆಗೆ ಸೆಳೆದಿತ್ತು. 28ರಂದೇ ಅವರು ದೆಹಲಿಯಲ್ಲಿದ್ದರು. ಅಂದ ಹಾಗೆ, ಅವರು ವೈದ್ಯ ವೃತ್ತಿಯನ್ನು ಅವಲಂಬಿಸದೆ, ಪಕ್ಷ ಮತ್ತು ವಿದ್ಯಾರ್ಥಿ ಸಂಘಟನೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟವರು.

‘ಬಳ್ಳಾರಿಯಿಂದ ದೆಹಲಿ ತಲುಪಿದ್ದಾಯಿತು. ಆದರೆ ಅಂದುಕೊಂಡಂತೆ ಮುಷ್ಕರದ ಸ್ಥಳಕ್ಕೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. 26ರ ಘಟನೆಯ ನಂತರ ಅಲ್ಲಿಗೆ ಹೋಗಲು ಪೊಲೀಸರು ಜನರನ್ನು ಬಿಡುತ್ತಿರಲಿಲ್ಲ. ಬಿಗಿ ಕಾವಲು ಹಾಕಲಾಗಿತ್ತು. ನಾನು ಹೋದಾಗ ಸನ್ನಿವೇಶ ಇನ್ನಷ್ಟು ಪ್ರಕ್ಷುಬ್ಧವಾಗಿತ್ತು. ಸೆಂಟರ್‌ನ ವೈದ್ಯರು ಬಂದು ಮಾತನಾಡಿದರು. ಆದರೂ, ಮುಖ್ಯ ವೇದಿಕೆಯ ಬಳಿಗೆ ತೆರಳಲು ದೆಹಲಿಯ ಮಾರ್ಗದಲ್ಲಿ ಅಡ್ಡದಾರಿಯೊಂದಿದ್ದು, ಅದರ ಮೂಲಕ ಮೂರು ಕಿ.ಮೀ ನಡೆದುಕೊಂಡೇ ಹೋದೆವು’ ಎಂದು ಅವರು ಸ್ಮರಿಸಿಕೊಂಡರು.

‘ಫೆ.3ರಂದು ಅಲ್ಲಿಂದ ಹೊರಕ್ಕೆ ಬರುವಾಗಲೂ ಕಷ್ಟವಾಯಿತು. ಆ ಮಾರ್ಗದಲ್ಲಿ ಜನ ಬರಬಾರದು ಮತ್ತು ಹೋಗಬಾರದು ಎಂಬ ಕಾರಣಕ್ಕೆ 10 ಅಡಿಯ ಹಳ್ಳವನ್ನು ತೋಡಲಾಗಿತ್ತು. ಹೀಗಾಗಿ ಹರಿಯಾಣದ ಮಾರ್ಗದಲ್ಲಿ ನಡೆದು ಬಂದು ಆಟೋರಿಕ್ಷಾ ಹಿಡಿದೆ’ ಎಂದರು. ಕೊನೆವರೆಗೂ ಸ್ವಯಂಸೇವಕರು ಅವರೊಂದಿಗೆ ಇದ್ದರು.

ಸಿಂಗುಗಡಿಯ ಮೆಡಿಕಲ್‌ ಸರ್ವಿಸ್‌ ಸೆಂಟರ್‌ನ ಶಿಬಿರದಲ್ಲಿ ಸೇವೆ ಸಲ್ಲಿಸಿದ ವಿವಿಧ ರಾಜ್ಯಗಳ ವೈದ್ಯರೊಂದಿಗೆ ಡಾ.ಎನ್‌.ಪ್ರಮೋದ್‌, (ಹಸಿರು ಶರ್ಟ್ ಧರಿಸಿದವರು)
ಸಿಂಗುಗಡಿಯ ಮೆಡಿಕಲ್‌ ಸರ್ವಿಸ್‌ ಸೆಂಟರ್‌ನ ಶಿಬಿರದಲ್ಲಿ ಸೇವೆ ಸಲ್ಲಿಸಿದ ವಿವಿಧ ರಾಜ್ಯಗಳ ವೈದ್ಯರೊಂದಿಗೆ ಡಾ.ಎನ್‌.ಪ್ರಮೋದ್‌, (ಹಸಿರು ಶರ್ಟ್ ಧರಿಸಿದವರು)

‘ಹಾಗೆ ಅದೊಂದು ಶಿಸ್ತುಬದ್ಧ ಹೋರಾಟ. ಒಂದು ತಂಡ ಮನೆಗೆ ತೆರಳಿದ ಬಳಿಕ, ಅಲ್ಲಿನ ಮತ್ತೊಂದು ತಂಡ ಮುಷ್ಕರಕ್ಕೆ ಹೊರಡುತ್ತದೆ. ಹೀಗೆ ಮುಷ್ಕರ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆ’ ಎಂದು ಹೋರಾಟದ ಅನನ್ಯತೆಯ ಕಡೆಗೆ ಗಮನ ಸೆಳೆದರು.

ಬುಧವಾರ ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದವರೆಗೆ ತೆರಳುವವರೆಗೂ ಅವರು ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ತಮ್ಮ ದೆಹಲಿಯ ವಿಶಿಷ್ಟ ಸೇವಾ ದಿನಗಳನ್ನು ಸ್ಮರಿಸಿಕೊಳ್ಳುತ್ತಲೇ ಇದ್ದರು.

ಭಾವಯಾನ: ‘ಚಂಡೀಘಡದಿಂದ ಬಂದಿದ್ದ ಮಹಿಳೆ ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ಮುಷ್ಕರದಲ್ಲಿ ಪಾಲ್ಗೊಂಡಿದ್ದು ಮನಕಲಕುವಂತೆ ಮಾಡಿತು. ಪಂಜಾಬಿನ ಹತ್ತನೇ ತರಗತಿಯ ವಿದ್ಯಾರ್ಥಿ 70 ಕಿ.ಮೀ ನಡೆದು ಬಂದಿದ್ದ. 70 ವರ್ಷದ ಒಬ್ಬ ಅಜ್ಜ ಸೈಕಲ್‌ನಲ್ಲೇ 300 ಕಿ.ಮೀ ದೂರದಿಂದ ಸಿಂಗು ಗಡಿಗೆ ಬಂದಿದ್ದರು. ನಂತರ ಗಾಜಿಪುರ ಗಡಿಗೆ ಹೋದರು. ಮೂರು ತಿಂಗಳ ಹಿಂದೆ ಕೊಲೆಯಾದ ಮಗನ ನೆನಪಿನಲ್ಲೇ ಮಹಿಳೆಯೊಬ್ಬರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ರೈತರೂ ಅಲ್ಲದ, ಪಂಜಾಬಿನವರೂ ಅಲ್ಲದ ಆದರೆ ಮುಷ್ಕರಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲೆಂದೇ ಭಾನುವಾರ ಬಂದ ಅಜ್ಜಿ ಮತ್ತು ಮೊಮ್ಮಗಳು ಎಲ್ಲರಿಗೂ ಊಟ ಬಡಿಸಿ ಶ್ರಮದಾನ ಮಾಡಿ ಹೋದರು’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

‘ಮಧ್ಯಪ್ರದೇಶ. ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣದ ವೈದ್ಯರು ಬಂದು ಮುಷ್ಕರ ನಿರತರ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಹೋಗಿದ್ದಾರೆ. ವೈದ್ಯರಿಗೆ, ಶುಶ್ರೂಷಕರಿಗೆ ಸಂಘಟಕರು ಹಾಗೂ ಅವರ ಬೆಂಬಲಿಗರು ತೋರುವ ಪ್ರೀತಿಯಂತೂ ಮೂಕರನ್ನಾಗಿಸುತ್ತದೆ’ ಎಂದು ಭಾವುಕರಾದರು.

‘ಟೆಂಟ್‌ನಲ್ಲೇ ವಾಸ್ತವ್ಯ ಹೂಡಿದ್ದ ನಮಗೆ, ಸಮೀಪದಲ್ಲೇ ಇದ್ದ ಪ್ರಾದೇಶಿಕ ಸಂಘಟನೆಯೊಂದರ ಮುಖಂಡರು ಕಚೇರಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದರು. ದಿನವೂ 250ರಿಂದ 300 ರೋಗಿಗಳು ಬರುತ್ತಿದ್ದರು. ಕೆಲವು ದಿನ ಐನೂರು ಮಂದಿಯ ಆರೋಗ್ಯ ತಪಾಸಣೆಯನ್ನು ನಡೆಸಬೇಕಾಗುತ್ತಿತ್ತು. ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೂ ತಪಾಸಣೆ, ನಂತರ ತುರ್ತು ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದೆವು. ಟಿಕ್ರಿ ಗಡಿ ಹಾಗೂ ಸಿಂಗು ಗಡಿಯಲ್ಲಿ ವೈದ್ಯರು ಟೆಂಟ್‌ಗಳಲ್ಲೇ ಲಭ್ಯರಿರುತ್ತಾರೆ. ಗಾಜಿಪುರ ಗಡಿಯಲ್ಲಿ ವೈದ್ಯರ ಸಂಚಾರಿ ಕ್ಯಾಂಪ್‌ ಕೂಡ ಕಾರ್ಯನಿರ್ವಹಿಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮುಷ್ಕರಕ್ಕೆ ಬರುವ ಅವಸರದಲ್ಲಿ ಬಿ.ಪಿ, ಮಧುಮೇಹದ ಗುಳಿಗೆಗಳನ್ನು ಮರೆತು ಬಂದವರು ಹಲವರು. ಆರೋಗ್ಯದ ಕಡೆಗೂ ಗಮನ ಕೊಡಲು ಆಗದ ಪರಿಸ್ಥಿತಿಯಲ್ಲಿದ್ದ ಹಿರಿಯರು ಹೆಚ್ಚು. ವೇದಿಕೆಯ ಬಳಿ ಬಂದು ಕಲ್ಲುತೂರಾಟ ನಡೆಸಿದ ಕಿಡಿಗೇಡಿಗಳಿಂದ ಗಾಯಗಳಾದವರೂ ಬಂದಿದ್ದರು. ಶೀತ, ನೆಗಡಿ, ಚರ್ಮದ ಸೋಂಕು, ಮೈಕೈ ನೋವಿನ ಸಮಸ್ಯೆಗೂ ಔಷಧಿ ಕೊಡುತ್ತಿದ್ದೆವು’ ಎಂದು ವೈದ್ಯಕೀಯ ಸೇವೆಯ ಕಡೆಗೆ ಗಮನ ಸೆಳೆದರು.

ಡಾ.ಎನ್‌.ಪ್ರಮೋದ್‌
ಡಾ.ಎನ್‌.ಪ್ರಮೋದ್‌

‘ದೆಹಲಿ ಭೇಟಿಯು ಜೀವನದಲ್ಲಿ ಮರೆಯಲಾಗದ ಘಟನೆ. ದೂರದಲ್ಲಿ ಕುಳಿತು ಮುಷ್ಕರ ನಿರತರನ್ನು ನೋಡುವುದು, ಕಾಳಜಿ ವ್ಯಕ್ತಪಡಿಸುವುದು ಒಂದು ಬಗೆ. ಅವರಿದ್ದಲ್ಲಿಗೇ ಹೋಗಿ ನಮ್ಮ ಕೈಲಾದಷ್ಟು ನೆರವಾಗುವುದು ಮತ್ತೊಂದು ಬಗೆ. ಆ ಹೋರಾಟಗಾರರ ದೃಢ ನಿರ್ಧಾರ, ಅವರ ಭಾವುಕತೆ, ಬದ್ಧತೆಗಳೆಲ್ಲವೂ ನನ್ನ ಉತ್ಸಾಹವನ್ನು ಹೆಚ್ಚಿಸಿದವು. ಅಷ್ಟೇ ಅಲ್ಲ. ‘ಅದೊಂದು ವ್ಯವಸ್ಥಿತವಾದ ಹೋರಾಟ, ರಾತ್ರಿವೇಳೆಯ ಕಾವಲು– ಭದ್ರತೆ, ಊಟದ ವ್ಯವಸ್ಥೆ, ಸರದಿ ಮುಷ್ಕರ, ಎಲ್ಲವೂ ಶಿಸ್ತು ಬದ್ಧ. ಹೋರಾಟದ ನೆಲದಲ್ಲಿ ಗ್ರಂಥಾಲಯಗಳೂ ಉಂಟು’ ಎಂದು ಗಮನ ಸೆಳೆದರು.

‘ನನಗೀಗ 40 ವರ್ಷ ವಯಸ್ಸು. 70ರ ವೃದ್ಧರು ಸಾಂವಿಧಾನಿಕ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಗಟ್ಟಿ ಹೋರಾಟದಲ್ಲಿ ತೊಡಗಿರುವಾಗ ನಮ್ಮ ಸಮಸ್ಯೆಗಳು ಯಾವ ಲೆಕ್ಕ ಎನ್ನಿಸಿಬಿಟ್ಟಿತು’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT