ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಗಳ್ಳತನ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ; ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ

‘ಸೈಟ್‌ನಲ್ಲಿ ಇರಲ್ಲ, ಕೆಲಸ ಸರಿಯಾಗಲ್ಲ’
Last Updated 20 ನವೆಂಬರ್ 2020, 10:00 IST
ಅಕ್ಷರ ಗಾತ್ರ

ಹೊಸಪೇಟೆ: ‘ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಸೈಟ್‌ನಲ್ಲಿ ಇರಲ್ಲ. ಹೀಗಾಗಿಯೇ ಕೆಲಸ ಸರಿಯಾಗಲ್ಲ. ಮೈಗಳ್ಳತನ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ‘ನಿಯಮದ ಪ್ರಕಾರ ಕೆಲಸ ಮಾಡಿಸಬೇಕು. ಆಗ ಎಲ್ಲವೂ ಸರಿ ಆಗುತ್ತೆ. ಸೈಟ್‌ನಲ್ಲಿ ಇರಲ್ಲ. ಯಾರನ್ನೂ ಬಿಗಿ ಮಾಡೊಲ್ಲ. ಕೆಲಸ ಸರಿ ಆಗಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಧಿಕಾರಿಗಳು ಇರಬೇಕು. ಪ್ರತಿಯೊಂದನ್ನೂ ಸ್ಥಳದಲ್ಲಿ ಇದ್ದು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.

‘ಪಿಡಬ್ಲ್ಯೂಡಿ ಈಗ ಮೊದಲಿನಂತಲ್ಲ. ಏನೂ ಕೆಲಸ ಉಳಿದಿಲ್ಲ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದು, ಸೇತುವೆಗಳನ್ನಷ್ಟೇ ಕಟ್ಟುವ ಕೆಲಸವಿದೆ. ಇರುವ ರಸ್ತೆಗಳ ಮೇಲೆ ಅಧಿಕಾರಿಗಳು ಸುತ್ತಾಡಿ, ಪರಿಶೀಲಿಸಿ ಅವುಗಳನ್ನು ಸರಿಪಡಿಸಬೇಕು. ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸಾಕು. ಉದಾಸೀನ ಬಿಟ್ಟು ಕೆಲಸ ಮಾಡಬೇಕು. ಇಲ್ಲವಾದರೆ ಅಮಾನತುಗೊಳಿಸಲಾಗುವುದು ’ ಎಂದು ಎಚ್ಚರಿಸಿದರು.

ರಸ್ತೆ ದುರಸ್ತಿಗೆ ಮಾರ್ಚ್‌ ಗಡುವು:‘ಭಾರಿ ಮಳೆಗೆ ಈ ವರ್ಷ ರಾಜ್ಯದ ಅನೇಕ ರಸ್ತೆ, ಸೇತುವೆಗಳಿಗೆ ಹಾನಿಯಾಗಿದ್ದು, ಒಟ್ಟು ₹3,500 ಕೋಟಿ ನಷ್ಟವಾಗಿದೆ. ಹಿಂದಿನ ವರ್ಷ ಪ್ರವಾಹದಿಂದ ₹7,000 ಕೋಟಿ ಹಾನಿಯಾಗಿತ್ತು. ರಸ್ತೆ, ಸೇತುವೆ, ಕಟ್ಟಡಗಳ ಪುನರ್‌ ನಿರ್ಮಾಣಕ್ಕೆ ಈಗಾಗಲೇ ₹600 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ಕೆಲಸ ಆರಂಭಿಸಲು ಸೂಚಿಸಲಾಗಿದೆ. ಬರುವ ಮಾರ್ಚ್‌ ಒಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ಕೊಟ್ಟಿರುವೆ’ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗೆ ₹32 ಕೋಟಿ, ಜಿಲ್ಲಾ ರಸ್ತೆಗಳ ನಿರ್ಮಾಣಕ್ಕೆ ₹22 ಕೋಟಿ ಅನುದಾನ ನೀಡಲಾಗಿದೆ. ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಹುಬ್ಬಳ್ಳಿ–ಗುತ್ತಿ ರಾಷ್ಟ್ರೀಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿದೆ. ಅದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಕೋರಿದ್ದೇನೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಕೆಲವರು ಕಡಿಮೆ ರೇಟಿಗೆ ಟೆಂಡರ್‌ ಪಡೆದು ಕಳಪೆ ರಸ್ತೆ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ. ರಸ್ತೆಗಳು ಬೇಗ ಹಾಳಾದರೆ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ’ ಎಂದು ತಿಳಿಸಿದರು.

ಅರಣ್ಯ ಸಚಿವ ಆನಂದ್ ಸಿಂಗ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್, ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್ ಆಸಿಫ್‌, ತಹಶೀಲ್ದಾರ್‌ ಎಚ್.ವಿಶ್ವನಾಥ್, ಹೊಸಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿದಂತೆ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT