ಗುರುವಾರ , ಅಕ್ಟೋಬರ್ 29, 2020
26 °C
ಮುಂದುವರಿದ ಪ್ರತಿಭಟನೆ, ಅಧಿಕಾರಿಗಳ ಭೇಟಿ

ಹಾಥರಸ್‌ ಭೇಟಿಗೆ ರಾಹುಲ್‌, ಪ್ರಿಯಾಂಕಾಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯನ್ನು ಭೇಟಿಮಾಡಲು ಶನಿವಾರ ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ನೇತೃತ್ವದ ತಂಡಕ್ಕೆ ಅನುಮತಿ ನೀಡಲಾಗಿದೆ.

ಎರಡು ದಿನಗಳ ಹಿಂದೆ ಸಂತ್ರಸ್ತೆಯನ್ನು ಭೇಟಿಯಾಗಲು ಹೋಗಿದ್ದ ರಾಹುಲ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ನಡೆದಿತ್ತು. ತೃಣಮೂಲ ಕಾಂಗ್ರೆಸ್‌ ಮುಖಂಡ ಡರೆಕ್‌ ಒಬ್ರಿಯಾನ್‌ ನೇತೃತ್ವದ ತಂಡಕ್ಕೂ ಇದೇ ಸ್ಥಿತಿ ಎದುರಾಗಿತ್ತು.

ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ಅವರು ಪುನಃ ಶನಿವಾರ ಹಾಥರಸ್‌ನತ್ತ ಹೊರಟಿದ್ದರು. ಇವರ ಸ್ವಾಗತಕ್ಕೆ ದೆಹಲಿ– ಉತ್ತರ ಪ್ರದೇಶ ಗಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪೊಲೀಸ್‌ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಒಂದೆರಡು ಬಾರಿ ಲಾಠಿ ಬೀಸಿದ್ದಾರೆ. ಕೊನೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಐವರು ಸದಸ್ಯರ ತಂಡಕ್ಕೆ ಹಾಥರಸ್‌ಗೆ ಹೋಗಲು ಅನುಮತಿ ನೀಡಲಾಗಿದೆ.

ಅತ್ಯಾಚಾರ ಘಟನೆಯನ್ನು ಖಂಡಿಸಿ ಶನಿವಾರವೂ ವಿವಿಧೆಡೆ ಪ್ರತಿಭಟನೆ, ರ್‍ಯಾಲಿಗಳು ನಡೆದಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ರ್‍ಯಾಲಿ ನಡೆಸಿದ್ದಾರೆ. ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಹಿಂದುಳಿದ ವರ್ಗದವರು ಮತ್ತು ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ನಡೆಸುವ ಬಿಜೆಪಿಯು ದೇಶಕ್ಕೆ ಕೋವಿಡ್‌ಗಿಂತ ದೊಡ್ಡ ಪಿಡುಗಾಗಿದೆ’ ಎಂದರು.

ಉತ್ತರ ಪ್ರದೇಶದ ಮುಜಪ್ಫರ್‌ನಗರದಲ್ಲಿ ಪ್ರತಿಭಟನೆ ನಡೆಸಿದ ಸಮಾಜವಾದಿ ಪಾರ್ಟಿಯ ಯುವ ಘಟಕದ ಉಪಾಧ್ಯಕ್ಷ ಗೌರವ್‌ ಜೈನ್‌ ಹಾಗೂ ಇತರರನ್ನು ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಡಿ ಬಂಧಿಸಲಾಗಿದೆ.

ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಆಗ್ರಾದಲ್ಲಿ ಪ್ರತಿಭಟನೆ ನಡೆಸಿದ ವಾಲ್ಮೀಕಿ ಸಮುದಾಯದವರು ಹಾಗೂ ಪೊಲೀಸರ ಮಧ್ಯೆ ಶನಿವಾರ ಘರ್ಷಣೆ ನಡೆದಿದೆ. ಪ್ರತಿಭಟನಕಾರರು ಪೊಲೀಸರು ಹಾಗೂ ಸರ್ಕಾರಿ ವಾಹನಗಳತ್ತ ಕಲ್ಲು ತೂರಾಟ ನಡೆಸಿದ್ದಾರೆ.

‘ಮಹಿಳೆಯ ಅತ್ಯಾಚಾರ ಘಟನೆಯ ಪ್ರಾಥಮಿಕ ತನಿಖೆಯು ಜನರಿಗೆ ಸಮಾಧಾನ ತಂದಿಲ್ಲ. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಅಥವಾ ಸುಪ್ರೀಂ ಕೋರ್ಟ್‌ನ ಮೇಲುಸ್ತುವಾರಿಯಲ್ಲಿ ನಡೆಸಬೇಕು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಒತ್ತಾಯಿಸಿದ್ದಾರೆ.

ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಸಂತ್ರಸ್ತೆಯ ಕುಟುಂಬದವರನ್ನು ಬೆದರಿಸುತ್ತಿದೆ. ಈ ನಡವಳಿಕೆಯನ್ನು ಒಪ್ಪಲಾಗದು. ಉತ್ತರಪ್ರದೇಶ ಸರ್ಕಾರವು ನೈತಿಕವಾಗಿ ಭ್ರಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದರು.

‘ಎಸ್‌ಐಟಿ ಕ್ರಮ ಕೈಗೊಳ್ಳಲಿದೆ’

‘ಸಂತ್ರಸ್ತೆಯ ಕುಟುಂಬದವರು ವ್ಯಕ್ತಪಡಿಸಿರುವ ಆತಂಕದ ಬಗ್ಗೆ ವಿಶೇಷ ತನಿಖಾ ದಳದವರು (ಎಸ್‌ಐಟಿ) ಗಮನಹರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ’ ಎಂದು ಗೃಹ ಖಾತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್‌ ಅವಸ್ಥಿ ಹೇಳಿದ್ದಾರೆ.

ಡಿಜಿಪಿ ಎಚ್‌.ಸಿ. ಅವಸ್ಥಿ ಅವರೊಂದಿಗೆ ಶನಿವಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಮಾಡಿದ ಬಳಿಕ ಅವರು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿದರು.

‘ಎಸ್‌ಐಟಿ ತನಿಖೆ ಜಾರಿಯಲ್ಲಿದೆ. ಅದು ತನ್ನ ಕೆಲಸ ಮುಂದುವರಿಸುವುದು. ಕಟುಂಬದವರು ವ್ಯಕ್ತಪಡಿಸಿರುವ ಆತಂಕಗಳನ್ನು ಪರಿಹರಿಸಲಾಗುವುದು. ಮುಖ್ಯಮಂತ್ರಿ ಆದಿತ್ಯನಾಥ ಅವರ ಸೂಚನೆಯಂತೆ ಸಂತ್ರಸ್ತೆಯ ಕುಟುಂಬಕ್ಕೆ ಹಾಗೂ ಗ್ರಾಮಕ್ಕೆ ಶಾಶ್ವತವಾಗಿ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕುಟುಂಬದ ಪ್ರತಿಯೊಬ್ಬರನ್ನೂ ನಾವು ಭೇಟಿಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆಯನ್ನು ನೀಡಿದ್ದೇವೆ’ ಎಂದು ಅವಸ್ಥಿ ತಿಳಿಸಿದರು.

ಮಾಧ್ಯಮಕ್ಕೆ ಪ್ರವೇಶ: ಅಧಿಕಾರಿಗಳ ಭೇಟಿಯ ನಂತರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಮಾಡಲು ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ಶನಿವಾರ ಮಧ್ಯಾಹ್ನದವರೆಗೂ ಮಾಧ್ಯಮಗಳಿಗೆ ಗ್ರಾಮದೊಳಗೆ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.

ಸ್ಮೃತಿಗೆ ದಿಗ್ಬಂಧನ

ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ವಾರಾಣಸಿಯಲ್ಲಿ ಕೇಂದ್ರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಸಚಿವೆ ಸ್ಮೃತಿ ಇರಾನಿ ಅವರ ವಾಹನವನ್ನು ತಡೆದು ದಿಗ್ಬಂಧನ ಹಾಕಿದರು.

ರೈತರು ಹಾಗೂ ಕೃಷಿ ವಿಜ್ಞಾನಿಗಳ ಜತೆ ಸಂವಾದ ನಡೆಸಲು ಸ್ಮೃತಿ ಅವರು ಶನಿವಾರ ವಾರಾಣಸಿಗೆ ಬಂದಿದ್ದರು. ಅಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅವರ ವಾಹನಗಳನ್ನು ತಡೆದು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ‘ಅತ್ಯಾಚಾರ ಘಟನೆಯ ವಿಚಾರದಲ್ಲೂ ವಿರೋಧಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಸ್ಮೃತಿ ಆರೋಪಿಸಿದ್ದಾರೆ.

ಗೃಹಬಂಧನ: ಆರೋಪ

‘ಹಾಥರಸ್‌ಗೆ ಭೇಟಿನೀಡಿ, ಸಂತ್ರಸ್ತ ಮಹಿಳೆಯ ಪರವಾಗಿ ಹೋರಾಡುವುದನ್ನು ತಡೆಯಲು ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ’ ಎಂದು ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ಅಧ್ಯಕ್ಷ ಅಜಯ್‌ಕುಮಾರ್‌ ಲಲ್ಲು ಹೇಳಿದ್ದಾರೆ.

ಪಕ್ಷದ ಎಲ್ಲಾ ಜಿಲ್ಲಾಘಟಕಗಳ ಮುಖ್ಯಸ್ಥರು ಹಾಗೂ 500ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸರ್ಕಾರವು ಗೃಹಬಂಧನದಲ್ಲಿಟ್ಟಿದೆ. ರಾಜ್ಯದಲ್ಲಿ ಗೂಂಡಾಗಿರಿಯನ್ನು ಸ್ಥಾಪಿಸಲಾಗಿದೆ ಮತ್ತು ಸರ್ಕಾರವು ಅಪರಾಧಿಗಳ ಪರವಾಗಿ ನಿಲ್ಲುತ್ತದೆ ಎಂಬುದನ್ನು ಸ್ವತಃ ಸರ್ಕಾರವೇ ಸಾಬೀತುಪಡಿಸುತ್ತಿದೆ’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕವು ಹೇಳಿದೆ.

ಕೋಟಿ ದಾಟಿದ ವಿಡಿಯೋ ವೀಕ್ಷಣೆ

ಸಂತ್ರಸ್ತೆಯ ಕುಟುಂಬದ ಪರವಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನಡೆಸುವ ಹೋರಾಟದ ವಿಡಿಯೊಗಳನ್ನು ಫೇಸ್‌ಬುಕ್‌ ಹಾಗೂ ಇತರ ಜಾಲತಾಣಗಳಲ್ಲಿ 1.89 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಸೆಪ್ಟೆಂಬರ್‌ 25ರಿಂದ ಅ.2ರವರೆಗೆ ಅವರು ನಡೆಸಿದ ವಿವಿಧ ಹೋರಾಟಗಳ 20 ವಿಡಿಯೊಗಳು ಜಾಲತಾಣಗಳಲ್ಲಿವೆ. ಅವುಗಳಲ್ಲಿ ಹೆಚ್ಚಿನವು ಲೈವ್‌ ವಿಡಿಯೊಗಳಾಗಿದ್ದವು. ಈ ವಾರದಲ್ಲಿ ರಾಹುಲ್‌ ವಿಡಿಯೊಗಳನ್ನು ನೋಡಿದವರ ಸಂಖ್ಯೆಯು ಪ್ರಧಾನಿ ಮೋದಿ ಅವರ ವಿಡಿಯೊಗಳ ವೀಕ್ಷಕರಿಗಿಂತ ಎರಡು ಪಟ್ಟು ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು