ಗುರುವಾರ , ಸೆಪ್ಟೆಂಬರ್ 23, 2021
23 °C

ಜಿಡಿಪಿ ಐತಿಹಾಸಿಕ ಕುಸಿತಕ್ಕೆ ಜಿಎಸ್‌ಟಿ ಕಾರಣ: ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Rahul Gandhi

ನವದೆಹಲಿ: ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರದ ‘ಗಬ್ಬರ್ ಸಿಂಗ್ ಟ್ಯಾಕ್ಸ್‌’ (ಸರಕು ಮತ್ತು ಸೇವಾ ತೆರಿಗೆ/ಜಿಎಸ್‌ಟಿ) ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಈ ಕುರಿತು, ‘ಮೋದಿ ಸರ್ಕಾರವು ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ಮೂರನೇ ವಿಡಿಯೊದಲ್ಲಿ ಅವರು ಪ್ರಸ್ತಾಪಿಸಿದ್ದಾರೆ. ಜಿಎಸ್‌ಟಿ ಎಂಬುದು ತೆರಿಗೆ ವ್ಯವಸ್ಥೆಯಲ್ಲ, ಬಡವರ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.

‘ಜಿಎಸ್‌ಟಿಯು ಲಕ್ಷಾಂತರ ಸಣ್ಣ ಉದ್ಯಮಗಳನ್ನು, ಉದ್ಯೋಗಗಳನ್ನು ಕಸಿದುಕೊಂಡಿದೆ. ಯುವಕರ ಮತ್ತು ರಾಜ್ಯಗಳ ಆರ್ಥಿಕತೆಯ ಭವಿಷ್ಯವನ್ನು ನಾಶ ಮಾಡಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ –23.9ಕ್ಕೆ ಇಳಿಕೆಯಾಗಿದೆ. ಈ ಕುರಿತು ವಿಡಿಯೊದಲ್ಲಿ ವಿವರಣೆ ನೀಡಿರುವ ರಾಹುಲ್ ಗಾಂಧಿ, ಜಿಎಸ್‌ಟಿಯು ಅಸಂಘಟಿತ ವಲಯದ ಆರ್ಥಿಕತೆ ಮೇಲಿನ ಎರಡನೇ ದಾಳಿಯಾಗಿದೆ ಎಂದಿದ್ದಾರೆ. ಜಿಎಸ್‌ಟಿ ಎಂಬುದು ಒಂದು ತೆರಿಗೆ, ಕನಿಷ್ಠ ತೆರಿಗೆ ಮತ್ತು ಸರಳ ತೆರಿಗೆ ಎಂಬ ಯುಪಿಎ ಸರ್ಕಾರದ ಪರಿಕಲ್ಪನೆಯಾಗಿತ್ತು. ಆದರೆ, ಎನ್‌ಡಿಎಯ ಜಿಎಸ್‌ಟಿ ಪರಿಕಲ್ಪನೆ ಪೂರ್ತಿಯಾಗಿ ಭಿನ್ನವಾಗಿದ್ದು, ಎರಡರಿಂದ ಮೂರು ಸ್ತರದ, ಶೇ 28ರ ವರೆಗಿನ ತೆರಿಗೆ ಒಳಗೊಂಡಿದೆ. ಇದು ಜಟಿಲವಾಗಿದ್ದು, ಅನೇಕರಿಗೆ ಸುಲಭದಲ್ಲಿ ಅರ್ಥವಾಗದು. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಜಿಎಎಸ್‌ಟಿ ಅಡಿಯಲ್ಲಿ ತೆರಿಗೆ ಸಲ್ಲಿಸಲು ಸಾಧ್ಯವಿಲ್ಲ. ಆದರೆ, ದೊಡ್ಡ ಕಂಪನಿಗಳು 5ರಿಂದ 15 ಖಾತೆಗಳನ್ನು ಹೊಂದುವ ಮೂಲಕ ಸುಲಭವಾಗಿ ತೆರಿಗೆ ಪಾವತಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಜಿಎಸ್‌ಟಿಯ ಫಲಿತಾಂಶವೆಂದರೆ, ತೆರಿಗೆ ಮೂಲಕ ಸಂಗ್ರಹಿಸಿದ ಹಣವನ್ನು ಮೊದಲ ಬಾರಿಗೆ ರಾಜ್ಯಗಳಿಗೆ ನೀಡಲಾಗುತ್ತಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಸೇರಿ ಇತರ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು