ಶುಕ್ರವಾರ, ಮಾರ್ಚ್ 31, 2023
22 °C
ನೀಟ್‌–ಜೆಇಇ ಮುಂದೂಡಿಕೆ ಬೇಡಿಕೆ ಪರಿಗಣಿಸದ ಕೇಂದ್ರ ಸರ್ಕಾರ

ಭಾರತದ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿರುವ ಕೇಂದ್ರ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೀಟ್‌–ಜೆಇಇ ಪರೀಕ್ಷೆ ಹಾಗೂ ಎಸ್‌ಎಸ್‌ಸಿ ಪರೀಕ್ಷೆಯನ್ನು ಮುಂದೂಡಬೇಕು ಎನ್ನುವ ವಿದ್ಯಾರ್ಥಿಗಳ ಬೇಡಿಕೆಯನ್ನು ದುರಹಂಕಾರದ ಕಾರಣ ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದು, ಸರ್ಕಾರವು ಭಾರತದ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದಿದ್ದಾರೆ. 

ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕೆ ಇರುವ ಜೆಇಇ–ಮೇನ್ಸ್‌ ಮಂಗಳವಾರದಿಂದ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಹುಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೋವಿಡ್‌–19 ಪಿಡುಗಿನ ನಡುವೆಯೇ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಠಿಣ ಮುನ್ನೆಚ್ಚರಿಕಾ ಕ್ರಮಗಳೊಂದಿಗೇ ಪರೀಕ್ಷೆ ಆರಂಭವಾಗಿದೆ. 

‘ವಿದ್ಯಾರ್ಥಿಗಳ ನೈಜ ಕಳವಳವನ್ನು ಈ ರೀತಿ ನಿರಾಕರಿಸುತ್ತಿರುವುದಕ್ಕೆ ಸರ್ಕಾರದ ದುರಹಂಕಾರವೇ ಕಾರಣ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಕೇವಲ ಘೋಷವಾಕ್ಯಗಳು ಸಾಲುವುದಿಲ್ಲ’ ಎಂದು ಟ್ವೀಟ್‌ ಮುಖಾಂತರ ರಾಹುಲ್‌ ಟೀಕಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಟ್ವೀಟ್‌ ಮಾಡಿದ್ದು, ‘ ಹಲವು ವರ್ಷದಿಂದ ಎಸ್‌ಎಸ್‌ಸಿ ಹಾಗೂ ರೈಲ್ವೆಯು ನಡೆಸಿದ ಹಲವು ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿಲ್ಲ. ಸರ್ಕಾರವು ಯುವಜನರ ಮಾತನ್ನು ಕೇಳಲಿ. ಯುವಜನರಿಗೆ ಉದ್ಯೋಗ ಬೇಕೇ ವಿನಃ ಭಾಷಣವಲ್ಲ’ ಎಂದಿದ್ದಾರೆ. 

ಫೇಸ್‌ಬುಕ್‌ ವಿರುದ್ಧ ತನಿಖೆಗೆ ಆಗ್ರಹ: ‘ಭಾರತದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಸಾಮರಸ್ಯದ ಮೇಲೆ ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ ದಾಳಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ಬಯಲಿಗೆಳೆದಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. 

ಫೇಸ್‌ಬುಕ್‌ ಕುರಿತು ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಂಕಣವೊಂದನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ರಾಹುಲ್‌, ‘ನಮ್ಮ ದೇಶದ ವಿಷಯದಲ್ಲಿ ಯಾವುದೇ ವ್ಯಕ್ತಿ ಅಥವಾ ವಿದೇಶ ಕಂಪನಿಗಳ ಮಧ್ಯಪ್ರವೇಶಕ್ಕೆ ಬಿಡಲು ಸಾಧ್ಯವಿಲ್ಲ. ತಕ್ಷಣವೇ ಈ ಕುರಿತು ತನಿಖೆಯಾಗಬೇಕು. ಅಪರಾಧ ಸಾಬೀತಾದಲ್ಲಿ ಕಠಿಣ ಶಿಕ್ಷೆ ನೀಡಬೇಕು’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು