ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾರೂಪ ಪಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ; ಎನ್‌ಟಿಪಿಸಿ ಪರೀಕ್ಷೆ ಮುಂದೂಡಿಕೆ

Last Updated 26 ಜನವರಿ 2022, 19:59 IST
ಅಕ್ಷರ ಗಾತ್ರ

ನವದೆಹಲಿ: ‘ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕೆಟಗರಿ’ (ಎನ್‌ಟಿಪಿಸಿ) ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆ ವಿರೋಧಿಸಿ ಬಿಹಾರ, ಉತ್ತರಪ್ರದೇಶದ ಹಲವೆಡೆ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಹಿಂಸಾರೂಪ ಪಡೆದಿದೆ.ಇದರ ಬೆನ್ನಲ್ಲೇ, ರೈಲ್ವೆಯು ‘ಎನ್‌ಟಿಪಿಸಿ’ ಹಾಗೂ ‘ಲೆವೆಲ್‌–1’ ಪರೀಕ್ಷೆಗಳನ್ನು ಮುಂದೂಡಿದೆ.

ಬಿಹಾರದಲ್ಲಿ ಪ್ಯಾಸೆಂಜರ್‌ ರೈಲೊಂದಕ್ಕೆ ಉದ್ಯೋಗಾಕಾಂಕ್ಷಿಗಳು ಕಲ್ಲುಗಳನ್ನು ತೂರಿದ್ದಾರೆ. ಗಯಾ ಜಂಕ್ಷನ್‌ ರೈಲು ನಿಲ್ದಾಣಕ್ಕೆ ನುಗ್ಗಿದ ಉದ್ರಿಕ್ತರ ಗುಂಪೊಂದು, ಭಭುವಾ–ಪಟ್ನಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಿದೆ. ಲಾಠಿ ಪ್ರಹಾರ, ಅಶ್ರುವಾಯು ಬಳಸಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

‘ಪಟ್ನಾ ಹೊರವಲಯದ ತಾರೆಗನಾ, ಜೆಹಾನಾಬಾದ್‌ನಲ್ಲಿಯೂ ಪ್ರತಿಭಟನೆ ನಡೆಸಿದರು’ ಎಂದು ಪೂರ್ವ–ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್‌ಕುಮಾರ್ ತಿಳಿಸಿದ್ದಾರೆ.

ಕೆಲ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ಅಭ್ಯರ್ಥಿಗಳು ಮಂಗಳವಾರ ಸಹ ಕುಳಿತು ಪ್ರತಿಭಟಿಸಿದ್ದರಿಂದಾಗಿ ರೈಲು ಸಂಚಾರ ವ್ಯತ್ಯಯಗೊಂಡಿತ್ತು.

ಮುಂದೂಡಿಕೆ: ‘ಫೆ.15ರಂದು ಆರಂಭವಾಗಬೇಕಿದ್ದ ಸಿಬಿಟಿಯ 2ನೇ ಹಂತದ ಪರೀಕ್ಷೆ ಹಾಗೂ ಫೆ. 23ರಿಂದ ಆರಂಭವಾಗಬೇಕಿದ್ದ ಮೊದಲ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದೆ’ ಎಂದು ರೈಲ್ವೆ ಮೂಲಗಳು ಹೇಳಿವೆ.

ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿ) ನಡೆಸಿರುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರ ಹಾಗೂ ಅನುತ್ತೀರ್ಣಗೊಂಡವರ ಅಹವಾಲುಗಳನ್ನು ಆಲಿಸುವ ಸಂಬಂಧ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ರೈಲ್ವೆ ವಕ್ತಾರ ತಿಳಿಸಿದ್ದಾರೆ.

ಪ್ರತಿಭಟನೆ ಏಕೆ?: ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸುವ ರೈಲ್ವೆಯ ನಿರ್ಧಾರವನ್ನು ಉದ್ಯೋಗಾಕಾಂಕ್ಷಿಗಳು ವಿರೋಧಿಸಿದ್ದು, ಸೋಮವಾರದಿಂದಲೇ ಪ್ರತಿಭಟನೆಗಿಳಿದಿದ್ದಾರೆ.

‘ಅಂತಿಮ ಆಯ್ಕೆಗಾಗಿ ಅಭ್ಯರ್ಥಿಗಳು ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ಎದುರಿಸಬೇಕು ಎಂದು ರೈಲ್ವೆ ಹೇಳುತ್ತಿದೆ. ಇದು ಮೊದಲ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾಡುತ್ತಿರುವ ವಂಚನೆ’ ಎಂದು ಪ್ರತಿಭಟನಕಾರರು ಹೇಳುತ್ತಾರೆ.

‘ನಿಮ್ಮ ಸ್ವತ್ತುಗಳಿವು;ನಾಶ ಮಾಡಬೇಡಿ’

‘ನಿಮ್ಮ ಅಹವಾಲುಗಳನ್ನು ಆಲಿಸಿ, ಸಮಸ್ಯೆ ಇತ್ಯರ್ಥಗೊಳಿಸಲಾಗುವುದು. ಹೀಗಾಗಿ ಯಾರೂ ಸಾರ್ವಜನಿಕ ಸ್ವತ್ತುಗಳನ್ನು ಹಾಳು ಮಾಡಬಾರದು’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಭಟನಕಾರರಿಗೆ ಬುಧವಾರ ಮನವಿ ಮಾಡಿದರು.‘ಇದು ನಿಮ್ಮದೇ ಸ್ವತ್ತು. ಏಕೆ ಹಾಳು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ ಅವರು, ‘ಸಾರ್ವಜನಿಕ ಆಸ್ತಿಯನ್ನು ಹೀಗೆ ಹಾಳುಗೆಡಹಿದರೆ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಸಿದ್ದಾರೆ.

ದೂರು ಸಲ್ಲಿಕೆಗೆ ಫೆ.16ರವರೆಗೆ ಅವಕಾಶ

ಅಭ್ಯರ್ಥಿಗಳು ತಮ್ಮ ದೂರು/ಅಹವಾಲುಗಳನ್ನುrrbcommittee@railnet.gov.in ಈ ವಿಳಾಸಕ್ಕೆ ಕಳುಹಿಸಬೇಕು. ಫೆ. 16 ಕೊನೆಯ ದಿನವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಉನ್ನತಾಧಿಕಾರ ಸಮಿತಿಯು ದೂರುಗಳನ್ನು ಪರಿಶೀಲಿಸಿ, ಮಾರ್ಚ್ 4ರಂದು ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT