ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಸರ್ಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ನಿರ್ಧಾರ

ಶುಕ್ರವಾರದಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನ
Last Updated 13 ಆಗಸ್ಟ್ 2020, 12:38 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶುಕ್ರವಾರ(ಆ.14) ಅವಿಶ್ವಾಸ ನಿರ್ಣಯವನ್ನು ಬಿಜೆಪಿ ಮಂಡಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್‌ ಚಂದ್‌ ಕಠಾರಿಯಾ ತಿಳಿಸಿದರು.

ಗುರುವಾರ ನಡೆದ ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ‘ಶುಕ್ರವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು. ಈ ಕುರಿತ ಪ್ರಸ್ತಾವವನ್ನು ಅಂತಿಮಗೊಳಿಸಲಾಗುತ್ತಿದೆ’ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಕಠಾರಿಯಾ ತಿಳಿಸಿದರು.

‘ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದರು ಎಂಬ ಆರೋಪದಡಿ ಸ್ಪೆಷಲ್‌ ಆಪರೇಷನ್‌ ಗ್ರೂಪ್ (ಎಸ್‌ಒಜಿ) ಹಲವರನ್ನು ಬಂಧಿಸಿತು. ಇವರು ಬಿಜೆಪಿಗೆ ಸೇರಿದವರು ಎಂಬಂತೆ ಬಿಂಬಿಸುವ ಪ್ರಯತ್ನವನ್ನೂ ಕಾಂಗ್ರೆಸ್‌ ಸರ್ಕಾರ ಮಾಡಿ ವಿಫಲವಾಯಿತು. ಕಾಂಗ್ರೆಸ್‌ನೊಳಗಿನ ಬಿಕ್ಕಟ್ಟು ಪರಿಹಾರವಾಯಿತು ಎಂದು ಅವರು ಹೇಳುತ್ತಿದ್ದರೂ, ಪಕ್ಷದೊಳಗಿನ ಭಿನ್ನಾಭಿಪ್ರಾಯ ಶಮನವಾಗಿಲ್ಲ’ ಎಂದು ಕಠಾರಿಯಾ ಹೇಳಿದರು.

74 ಶಾಸಕರು ಭಾಗಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಮಾತನಾಡಿ, ‘ಬಿಜೆಪಿ ಹಾಗೂ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ್‌ ಪಕ್ಷ (ಆರ್‌ಎಲ್‌ಪಿ)ಯ ಒಟ್ಟು 75 ಶಾಸಕರ ಪೈಕಿ 74 ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಜರಿದ್ದರು. ಗೆಹ್ಲೋಟ್‌ ನೇತೃತ್ವದ ರಾಜ್ಯ ಸರ್ಕಾರವು ‘ಅಸಂಬದ್ಧ ಸರ್ಕಾರ’ವಾಗಿದೆ’ ಎಂದು ಟೀಕಿಸಿದರು.

ಕಳೆದೊಂದು ತಿಂಗಳಿನಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ‘ಸೌಹಾರ್ದಯುತ ಪರಿಹಾರ’ ಪಡೆದ ಕೆಲ ದಿನಗಳ ನಂತರ ವಿರೋಧ ಪಕ್ಷ ಈ ತೀರ್ಮಾನ ಕೈಗೊಂಡಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗರಾದ 18 ಕಾಂಗ್ರೆಸ್‌ ಶಾಸಕರು ಬಂಡಾಯವೆದ್ದಿದ್ದರು. ಇದಾದ ಬೆನ್ನಲ್ಲೇ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ರಾಜಸ್ಥಾನದಲ್ಲಿ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಪೂರ್ಣಗೊಂಡ ಅಧ್ಯಾಯ ಎಂದು ಸೋಮವಾರವಷ್ಟೇ ಕಾಂಗ್ರೆಸ್‌ ತಿಳಿಸಿತ್ತು. ಎಲ್ಲ ಶಾಸಕರೂ ಸರ್ಕಾರಕ್ಕೆ ಬೆಂಬಲವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಿತ್ತು.

ಇಬ್ಬರು ಬಂಡಾಯ ಶಾಸಕರ ಅಮಾನತು ರದ್ದು

ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ, ಪೈಲಟ್‌ ಬೆಂಬಲಿಗರಾಗಿದ್ದ ಶಾಸಕರಾದ ಭನ್ವರ್‌ಲಾಲ್‌ ಶರ್ಮಾ ಹಾಗೂ ವಿಶ್ವೇಂದ್ರ ಸಿಂಗ್‌ ಅವರ ಅಮಾನತು ಆದೇಶವನ್ನು ಕಾಂಗ್ರೆಸ್‌ ಗುರುವಾರ ರದ್ದುಗೊಳಿಸಿದೆ. ಈ ಕುರಿತು ಟ್ವೀಟ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಪಾಂಡೆ ಮಾಹಿತಿ ನೀಡಿದ್ದಾರೆ.

ಸರ್ಕಾರವನ್ನು ಕೆಡವಲು ನಡೆಸಿದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ಕಳೆದ ತಿಂಗಳು ಈ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ದೆಹಲಿಯ ಹಿರಿಯ ಕಾಂಗ್ರೆಸ್‌ ನಾಯಕರು ಮಧ್ಯಸ್ಥಿಕೆ ವಹಿಸಿಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿದ್ದು, ಇದರ ಬೆನ್ನಲ್ಲೇ ಶಾಸಕರ ಅಮಾನತು ಆದೇಶವನ್ನೂ ಕಾಂಗ್ರೆಸ್‌ ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT