ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿ ಪತ್ರಕರ್ತನ ಬಂಧನಕ್ಕಾಗಿ ನೋಯ್ಡಾಕ್ಕೆ ತೆರಳಿದ ರಾಜಸ್ಥಾನ ಪೊಲೀಸರು

ಅಮನ್ ಚೋಪ್ರಾ ಬಂಧನಕ್ಕೆ ಡುಂಗರಪುರ ಕೋರ್ಟ್‌ನಿಂದ ವಾರಂಟ್
Last Updated 8 ಮೇ 2022, 10:37 IST
ಅಕ್ಷರ ಗಾತ್ರ

ಜೈಪುರ/ನೋಯ್ಡಾ: ಟಿವಿ ಚಾನೆಲ್‌ವೊಂದರ ಪತ್ರಕರ್ತ ಅಮನ್‌ ಚೋಪ್ರಾ ಅವರನ್ನು ಬಂಧಿಸಲು ರಾಜಸ್ಥಾನ ಪೊಲೀಸರನ್ನು ಒಳಗೊಂಡ ತಂಡ ಉತ್ತರ ಪ್ರದೇಶದ ನೋಯ್ಡಾಕ್ಕೆ ತೆರಳಿದೆ.

ಚೋಪ್ರಾ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಸಮುದಾಯಗಳ ನಡುವೆ ವೈರತ್ವ ಮೂಡಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಚೋಪ್ರಾ ವಿರುದ್ಧ ಬೂಂದಿ, ಆಲ್ವಾರ್‌ ಹಾಗೂ ಡುಂಗರಪುರ ಠಾಣೆಗಳಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೂಂದಿ ಹಾಗೂ ಆಲ್ವಾರ್‌ಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿ ಚೋಪ್ರಾ ಅವರು ರಾಜಸ್ಥಾನ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ, ಡುಂಗರಪುರ ಕೋರ್ಟ್‌ ಅವರ ಬಂಧನಕ್ಕೆ ವಾರಂಟ್‌ ಹೊರಡಿಸಿದೆ ಎಂದು ತಿಳಿಸಿದ್ದಾರೆ.

‘ಪೊಲೀಸರ ತಂಡ ನೋಯ್ಡಾದಲ್ಲಿ ಬೀಡು ಬಿಟ್ಟಿದ್ದು, ಚೋಪ್ರಾ ಪತ್ತೆಗಾಗಿ ಎಲ್ಲ ಸ್ಥಳಗಳಲ್ಲಿ ಶೋಧ ಕೈಗೊಂಡಿದೆ. ಅವರ ಮನೆಗೂ ಭೇಟಿ ನೀಡಲಾಗಿತ್ತು. ಆದರೆ, ಮನೆಗೆ ಬೀಗ ಹಾಕಲಾಗಿದೆ’ ಎಂದು ಡುಂಗರಪುರ ಎಸ್ಪಿ ಸುಧೀರ್‌ ಜೋಶಿ ತಿಳಿಸಿದ್ದಾರೆ.

ನೋಯ್ಡಾ ಪೊಲೀಸರಿಂದ ಸಹಕಾರ ಸಿಗುತ್ತಿದೆ ಎಂಬ ಪ್ರಶ್ನೆಗೆ, ‘ವಾರಂಟ್‌ ಅನುಸಾರ ಆರೋಪಿಯನ್ನು ಬಂಧಿಸಲು ತೆರಳುವ ಮುನ್ನ ಸ್ಥಳೀಯ ಠಾಣೆಗೆ ಬರುವಂತೆ ನಮ್ಮ ತಂಡಕ್ಕೆ ತಿಳಿಸಲಾಯಿತು. ಈ ನಡೆಯನ್ನು ಸಂಪೂರ್ಣ ಸಹಕಾರ ಎನ್ನಲಾಗದು’ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.

‘ರಾಜಸ್ಥಾನ ಪೊಲೀಸರ ಕಾರ್ಯಾಚರಣೆಗೆ ನಾವು ಯಾವುದೇ ರೀತಿ ಅಡ್ಡಿಪಡಿಸಿಲ್ಲ. ನಿಯಮಗಳಿಗೆ ಅನುಸಾರವಾಗಿಯೇ ಅವರಿಗೆ ನೆರವು ನೀಡಿದ್ದೇವೆ’ ಎಂದು ನೋಯ್ಡಾದ (ಸೆಂಟ್ರಲ್) ಹೆಚ್ಚುವರಿ ಡಿಸಿಪಿ ಎಲಾಮಾರಾನ್ ಜಿ. ತಿಳಿಸಿದ್ದಾರೆ.

‘ದೆಹಲಿಯ ಜಹಾಂಗಿರ್‌ಪುರಿಯಲ್ಲಿ ನಡೆದ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಪ್ರತೀಕಾರವಾಗಿ ರಾಜಸ್ಥಾನ ಸರ್ಕಾರ ಆಲ್ವಾರ್‌ ಜಿಲ್ಲೆಯ ರಾಜಗಡದಲ್ಲಿನ ದೇವಸ್ಥಾನವನ್ನು ಕೆಡವಿ ಹಾಕಿತು ಎಂಬುದಾಗಿ ಸುಳ್ಳು ಮಾಹಿತಿಯನ್ನು ಚೋಪ್ರಾ ಪ್ರಸಾರ ಮಾಡಿದ್ದರು. ಈ ಸಂಬಂಧ ಡುಂಗರಪುರದ ಕೊತ್ವಾಲಿ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT