ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ, ಟಿಎಂಸಿ, ಶಿವಸೇನೆಯನ್ನು ಒಂದೇ ವೇದಿಕೆಯಡಿ ತರಲು ಮಾತುಕತೆ: ರಾಜ್‌ಭರ್

ಬಿಜೆಪಿಗೆ ಸಮರ್ಥ ಎದುರಾಳಿ ಸಜ್ಜುಗೊಳಿಸಲು ರಾಜ್‌ಭರ್‌ ಯತ್ನ
Last Updated 20 ಜೂನ್ 2021, 10:13 IST
ಅಕ್ಷರ ಗಾತ್ರ

ಬಲಿಯಾ (ಉತ್ತರ ಪ್ರದೇಶ): ಬಿಜೆಪಿಯನ್ನು ಸಮರ್ಪಕವಾಗಿ ಎದುರಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಭಾನುವಾರ ಹೇಳಿದ್ದಾರೆ.

ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಬಿಎಸ್‌ಪಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ನಂತರ ಅದು ಬೇರೆಯಾಯಿತು. ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಮೈತ್ರಿ ಕೂಟ ರಚನಾ ಚಟುವಟಿಕೆಗಳು ಚುರುಕು ಪಡೆದಿವೆ.

‘ನಿನ್ನೆ, ನಾನು ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಅವರು ‘ಭಾಗಿದಾರಿ ಸಂಕಲ್ಪ ಮೋರ್ಚಾ’ದ ಭಾಗವಾಗಲು ತಾತ್ವಿಕವಾಗಿ ಒಪ್ಪಿದ್ದಾರೆ. ಆದರೆ ಮೋರ್ಚಾಗೆ ಸೇರುವ ಕುರಿತು ಕೇಜ್ರಿವಾಲ್‌ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಮುಂದಿನ ವಾರ ದೆಹಲಿಯಲ್ಲಿ ಕೇಜ್ರಿವಾಲ್ ಅವರೊಂದಿಗೆ ಸಭೆ ನಡೆಯಲಿದೆ’ ಎಂದು ರಾಜ್‌ಭರ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೋರ್ಚಾದಲ್ಲಿ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಇದ್ದರೂ ಕೇಜ್ರಿವಾಲ್ ಅವರು ಸೇರಲು ಬಯಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯನ್ನು ತಡೆಯುವುದು ಈಗಿನ ಅವಶ್ಯಕತೆಯಾಗಿದೆ. ಬಿಜೆಪಿಯು ಮೆಹಬೂಬಾ ಮುಫ್ತಿ ಅವರೊಂದಿಗೆ ಕೈಜೋಡಿಸಬಹುದಾದರೆ, ಕೇಜ್ರಿವಾಲ್ ಮತ್ತು ಒವೈಸಿ ಕೂಡ ಒಂದೇ ವೇದಿಕೆಯಲ್ಲಿ ಏಕೆ ಬರಲಾಗದು’ ಎಂದು ಮರು ಪ್ರಶ್ನಿಸಿದರು.

ಬಿಜೆಪಿಗೆ ಸಮರ್ಥ ಎದುರಾಳಿ ಕೂಟವನ್ನು ರಚಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಶಿವಸೇನಾ ಅಧ್ಯಕ್ಷ ಠಾಕ್ರೆ ಅವರನ್ನು ಈ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಅವರು ಹೇಳಿದರು.

ಶಿವಸೇನಾ ಮುಖಂಡ ಸಂಜಯ್ ರಾವತ್‌ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೊಬ್ಬರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ರಾವತ್‌ ಅವರು ಸದ್ಯದಲ್ಲಿಯೇ ಲಖನೌಗೆ ಬರಲಿದ್ದು, ಮಾತುಕತೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

2017 ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಸ್‌ಬಿಎಸ್‌ಪಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ರಾಜ್‌ಭರ್‌ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿಯೂ ಮಾಡಲಾಗಿತ್ತು. ನಂತರ ಅವರು ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT