ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರವೇಶಿಸದ ರಜನಿ ನಿರ್ಧಾರದಿಂದ ಬಿಜೆಪಿ ಕನಸು ಭಗ್ನ

Last Updated 30 ಡಿಸೆಂಬರ್ 2020, 3:39 IST
ಅಕ್ಷರ ಗಾತ್ರ

ಚೆನ್ನೈ: ರಾಜಕೀಯ ಪ್ರವೇಶಿಸಬೇಕು ಎಂಬ ತಮ್ಮ ಬಹುದಿನಗಳ ಕನಸಿನಿಂದ ಹಿಂದೆ ಸರಿಯುವ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ನಿರ್ಧಾರವು ತಮಿಳುನಾಡಿನಲ್ಲಿ ಭಾರಿ ನಿರಾಶೆಗೆ ದೂಡಿದ್ದು ಬಿಜೆಪಿಯನ್ನು.

ದ್ರಾವಿಡ ರಾಜ್ಯವಾದ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳುವ ಬಿಜೆಪಿಯ ಈ ವರೆಗಿನ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಹೀಗಾಗಿ, ಈ ಉದ್ದೇಶ ಸಾಧಿಸಿಕೊಳ್ಳಲು ಬಿಜೆಪಿಯು ಜನಪ್ರಿಯ ಸಿನಿಮಾ ತಾರೆ ರಜನಿಕಾಂತ್‌ ಅವರನ್ನು ಅವಲಂಬಿಸಿತ್ತು ಎಂಬುದು ರಹಸ್ಯವೇನೂ ಅಲ್ಲ. ಆದರೆ, ರಜನಿಯವರೇ ರಾಜಕೀಯಕ್ಕೆ ಬಾರದೇ, ಬಿಜೆಪಿಯು ತನ್ನ ಉದ್ದೇಶ ಈಡೇರಿಸಿಕೊಳ್ಳುವುದು ಈಗ ದುರ್ಗಮವಾಗಿ ಪರಿಣಮಿಸಿದೆ.

ರಜನಿಕಾಂತ್ ಅವರ ರಾಜಕೀಯ ಯೋಜನೆಗಳ ಹಿಂದೆ ಬಿಜೆಪಿ ಇತ್ತು ಎಂಬ ಮಾತುಗಳನ್ನು ಅ ಪಕ್ಷ ನಿರಾಕರಿಸುತ್ತಾ ಬಂದಿತ್ತು. ಆದರೆ, ರಜನಿ ತಾವು ಪಕ್ಷ ಕಟ್ಟುವುದಾಗಿ ಡಿ.3ರಂದು ಘೋಷಣೆ ಮಾಡಿದಾಗ, ತನ್ನ ಸಂತಸ ತಡೆದಿಟ್ಟುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ರಜನಿ ಅವರ ನಿರ್ಧಾರವನ್ನು ಬಿಜೆಪಿ ನಾಯಕರು ಮುಂದೆ ಬಂದು ಸ್ವಾಗತಿಸುವ ಮೂಲಕ ತಮ್ಮ ಸಂತೋಷವನ್ನು ಹೊರ ಹಾಕಿದ್ದರು.

ರಜನಿ ಬರುವಿಕೆ ನಿರೀಕ್ಷೆಯೊಂದಿಗೆ ಬಿಜೆಪಿ ಇತ್ತೀಚೆಗೆ ತನ್ನ ಮಿತ್ರ ಪಕ್ಷ ಎಐಎಡಿಎಂಕೆ ವಿರುದ್ಧವೇ ತಿರುಗಿಬಿದ್ದು, ಅದರ ಟೀಕೆಗೆ ಇಳಿದಿತ್ತು. ಮುಂದಿನ ಬಾರಿಯೂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಎಐಎಡಿಎಂಕೆಯ ನಿರ್ಧಾರವನ್ನು ಬಿಜೆಪಿಯು ವಿರೋಧಿಸಲಾರಂಭಿಸಿತ್ತು. ಈ ಬೆಳವಣಿಗೆಯು, ಎಐಎಡಿಎಂಕೆ ಜೊತೆಗಿನ ತನ್ನ ಸಂಬಂಧವನ್ನು ಬಿಜೆಪಿಯು ಕಡಿದುಕೊಳ್ಳುವ, ರಜನಿಕಾಂತ್‌ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳನ್ನು ಹುಟ್ಟು ಹಾಕಿತ್ತು.

ಈ ಮಧ್ಯೆ, ರಜನಿಕಾಂತ್‌ ಇತ್ತೀಚೆಗೆ ತಮಿಳುನಾಡಿನ ಬಿಜೆಪಿ ಘಟಕದ ಪದಾಧಿಕಾರಿಯಾಗಿದ್ದ ರಾ. ಅರ್ಜುನಮೂರ್ತಿ ಅವರನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಮೂಲಕ ತಮ್ಮ ಹಿಂದೆ ಯಾರಿದ್ದಾರೆ ಎಂಬುದನ್ನು ಮತ್ತಷ್ಟು ಸ್ಪಷ್ಟವಾಗುವಂತೆ ಮಾಡಿದ್ದರು. ರಜನಿ ರಾಜಕೀಯ ಪ್ರವೇಶದ ನಿರ್ಧಾರವನ್ನು ಆರ್‌ಎಸ್‌ಎಸ್ ವಿಚಾರವಾದಿ ಎಸ್‌ ಗುರುಮೂರ್ತಿ ಅವರು ಸುದ್ದಿ ವಾಹಿನಿಗಳಲ್ಲಿ ಕುಳಿತು ಸಮರ್ಥಿಸಿಕೊಂಡಿದ್ದರು. ಪಕ್ಷ ಸ್ಥಾಪನೆಯ ರಜನಿ ನಿರ್ಧಾರವನ್ನು ಕೊಂಡಾಡಿದ್ದರು. ಅಲ್ಲದೇ, ಅವರನ್ನು ಮಾಜಿ ಮುಖ್ಯಮಂತ್ರಿ, ಸಿನಿಮಾ ಕ್ಷೇತ್ರದ ದಿಗ್ಗಜ ಎಂ ಜಿ ರಾಮಚಂದ್ರನ್‌ ಅವರೊಂದಿಗೆ ಸಮೀಕರಿಸಿ ಮಾತನಾಡಿದ್ದರು.

ತಮಿಳುನಾಡಿನಲ್ಲಿ 'ಆಧ್ಯಾತ್ಮಿಕ ರಾಜಕಾರಣ' ಮಾಡುವುದಾಗಿ ಹೇಳಿದ್ದ ರಜನಿಕಾಂತ್ ಭರವಸೆಯು, ಬಿಜೆಪಿಗೆ ಅಲ್ಲಿನ ರಾಜಕಾರಣದಲ್ಲಿ ಹೊಸ ಭರವಸೆ ಹುಟ್ಟಿಸಿದ್ದು ಸುಳ್ಳಲ್ಲ. ಡಿಎಂಕೆ ಮತ್ತು ಹಿಂದೂ ವಿರೋಧಿ ಮತಗಳನ್ನು ರಜನಿ ತಮ್ಮ ಮಡಿಲಿಗೆ ಹಾಕಿಕೊಳ್ಳುತ್ತಾರೆ, ಅವರೊಂದಿಗೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ತಮಿಳುನಾಡು ರಾಜಕಾರಣದಲ್ಲಿ ರಹದಾರಿ ಲಭಿಸುತ್ತದೆ ಎಂಬುದು ಬಿಜೆಪಿಯ ನಂಬಿಕೆಯಾಗಿತ್ತು. ಆದರೆ, ಬಿಜೆಪಿಯ ಆ ನಂಬಿಕೆಗೇ ಈಗ ಪೆಟ್ಟು ಬಿದ್ದಿದೆ.

'ದ್ರಾವಿಡ ನೆಲದಲ್ಲಿ ಸೀಮಿತ ಕಾರ್ಯಕರ್ತರ ಪಡೆ ಮತ್ತು ಮತದಾರರ ಬೆಂಬಲದ ಹೊರತಾಗಿಯೂ ವಿಧಾನಸಭೆ ಚುನಾವಣೆಯಲ್ಲಿ ತನ್ನ ಉಪಸ್ಥಿತಿಯನ್ನು ಪ್ರದರ್ಶಿಸಲು ಬಿಜೆಪಿ ರಜನಿಕಾಂತ್ ಅವರ ಹೆಗಲ ಮೇಲೆ ಸವಾರಿ ಮಾಡುವ ಕನಸು ಕಾಣುತ್ತಿತ್ತು. ಆ ಕನಸು ಈಗ ಅಂತ್ಯವಾಗಿದೆ. ತಮ್ಮ ಆರೋಗ್ಯ ಪರಿಸ್ಥಿತಿಯು ರಜನಿ ಅವರಿಗೆ ವಾಸ್ತವವನ್ನು ತಿಳಿಸಿದೆ' ಎಂದು ಹಿರಿಯ ಪತ್ರಕರ್ತ ಆರ್ ಭಗವಾನ್ ಸಿಂಗ್ 'ಪ್ರಜಾವಾಣಿ'ಯ ಸೋದರ ಪತ್ರಿಕೆ 'ಡೆಕ್ಕನ್‌ ಹೆರಾಲ್ಡ್‌'ಗೆ ತಿಳಿಸಿದ್ದಾರೆ.

ವ್ಯಕ್ತಿ ಮತ್ತು ಆರಾಧನಾ ರಾಜಕಾರಣವು ಅರ್ಧ-ಶತಮಾನಕ್ಕೂ ದೀರ್ಘ ಸಮಯದಿಂದ ಪ್ರಾಮುಖ್ಯತೆ ಪಡೆದಿರುವ ತಮಿಳುನಾಡಿನಲ್ಲಿ, ರಜನಿಕಾಂತ್ ಅವರ ಅಪಾರ ಜನಪ್ರಿಯತೆಯು ಅವರನ್ನು 'ಕಿಂಗ್‌ಮೇಕರ್‌' ಆಗಿ ಮಾಡುತ್ತದೆ ಎಂದೂ, ಈ ಮೂಲಕ ಪಕ್ಷಕ್ಕೆ ಪರೋಕ್ಷವಾಗಿ ನೆರವು ಸಿಗುತ್ತದೆ ಎಂದೂ ಬಿಜೆಪಿ ಭಾವಿಸಿತ್ತು. ಆದರೆ, ರಜನಿಕಾಂತ್ ಅವರ ಹಿಂದಡಿಯು, ಬಿಜೆಪಿಯನ್ನು ತನ್ನ ಕಾರ್ಯತಂತ್ರಗಳನ್ನು ಮರು ಪರಿಶೀಲಿಸುವಂತೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ಮಾಡಿದ್ದ ಬಿಜೆಪಿಗೆ ತಮಿಳುನಾಡಿನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದು ಉತ್ತಮ ಆಯ್ಕೆಯಾಗಿ ಉಳಿದಿಲ್ಲ. ಹೀಗಾಗಿ ಮಿತ್ರಪಕ್ಷ ಎಐಎಡಿಎಂಕೆ ಕಡೆಗೆ ದೈನ್ಯದಿಂದ ನೋಡುವಂತೆ ಮಾಡಿದೆ.

'ರಜನಿ ನಿರ್ಧಾರದ ಹಿನ್ನೆಲೆಯಲ್ಲಿ ಬಿಜೆಪಿಯ ಕನಸು ಛಿದ್ರಗೊಂಡಿದೆ. ಹೀಗಾಗಿ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಯಥಾಸ್ಥಿತಿಗೆ ಬಂದಿದೆ. ಬಿಜೆಪಿಗೆ ಈಗ ಯಾವುದೇ ಮಾರ್ಗಗಳು ಉಳಿದಿಲ್ಲ. ಅದು ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಹತೆ ಇದೆ. 2019ರ ಲೋಕಸಭೆ ಚುನಾವಣೆಯಂತೆಯೇ ವಿಧಾನಸಭೆ ಚುನಾವಣೆಯೂ ಎರಡು ಪಕ್ಷಗಳ ನಡುವಿನ ಸೆಣಸಾಟವಾಗಲಿದೆ,' ಎಂದು ರಾಜಕೀಯ ವಿಶ್ಲೇಷಕ ಪಿ ರಾಮಜಯಮ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT